ಉಗ್ರರಿಗೆ ಹಣಕಾಸು: ವಿಚಾರಣೆಗೆ ಹಾಜರಾಗುವಂತೆ ಗಿಲಾನಿ ಪುತ್ರ ಹಾಗೂ ಮಿರ್ವೈಜ್ ಗೆ ಎನ್ ಐಎ ಸಮನ್ಸ್

ವಿಚಾರಣೆಗೆ ಹಾಜರಾಗುವಂತೆ ಪಾಕಿಸ್ತಾನ ಪರ ಪ್ರತ್ಯೇಕತಾವಾದಿ ಮುಖಂಡ ಸಯ್ಯದ್ ಆಲಿ ಶಾ ಗಿಲಾನಿ ಪುತ್ರ ಹಾಗೂ ಹುರಿಯತ್ ಕಾನ್ಪರೆನ್ಸ್ ಮುಖ್ಯಸ್ಥ ಮಿರ್ವೈಜ್ ಉಮರ್ ಪಾರೂಖ್ ಅವರಿಗೆ ಎನ್ ಐಎ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ.
ಮಿರ್ವೈಜ್ ಉಮರ್ ಪಾರೂಖ್, ಸಯ್ಯದ್ ಆಲಿ ಶಾ ಗಿಲಾನಿ ಮತ್ತು ಮೊಹಮ್ಮದ್ ಯಾಸಿನ್ ಮಲ್ಲಿಕ್
ಮಿರ್ವೈಜ್ ಉಮರ್ ಪಾರೂಖ್, ಸಯ್ಯದ್ ಆಲಿ ಶಾ ಗಿಲಾನಿ ಮತ್ತು ಮೊಹಮ್ಮದ್ ಯಾಸಿನ್ ಮಲ್ಲಿಕ್

ಶ್ರೀನಗರ: ಉಗ್ರರಿಗೆ ಹಣಕಾಸು ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪಾಕಿಸ್ತಾನ ಪರ ಪ್ರತ್ಯೇಕತಾವಾದಿ ಮುಖಂಡ ಸಯ್ಯದ್ ಆಲಿ ಶಾ ಗಿಲಾನಿ ಪುತ್ರ ಹಾಗೂ ಹುರಿಯತ್ ಕಾನ್ಪರೆನ್ಸ್  ಮುಖ್ಯಸ್ಥ ಮಿರ್ವೈಜ್ ಉಮರ್ ಪಾರೂಖ್ ಅವರಿಗೆ ರಾಷ್ಟ್ರೀಯ ತನಿಖಾ ದಳದ  ಅಧಿಕಾರಿಗಳು ಸಮನ್ಸ್  ಜಾರಿ ಮಾಡಿದ್ದಾರೆ.

ಸೋಮವಾರ ದೆಹಲಿಯಲ್ಲಿರುವ ರಾಷ್ಟ್ರೀಯ ತನಿಖಾ ದಳದ ಕೇಂದ್ರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.

ಉಗ್ರರಿಗೆ ಹಣಕಾಸು ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 26 ರಂದು ಮಿರ್ವೈಜ್
ಸೇರಿದಂತೆ  ಜಮ್ಮು- ಕಾಶ್ಮೀರದಲ್ಲಿನ  ಪ್ರತ್ಯೇಕತಾವಾದಿಗಳ ಮನೆಗಳಲ್ಲಿ ಎನ್ ಐಎ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು.
ಸಿಆರ್ ಪಿಎಫ್ ಸಿಬ್ಬಂದಿ,ಪೊಲೀಸರನ್ನೊಳಗೊಂಡ ಎನ್ ಐಎ ತಂಡ,ತೆಹ್ರರಿಕ್ - ಇ- ಹುರಿಯತ್ ಮುಖ್ಯಸ್ಥ ನಾಸೀಮ್ ಗಿಲಾನಿ,ಅಸ್ರಪ್ ಸೆಹ್ರಿ,ಮಿರ್ವೈಜ್ ಸೇರಿದಂತೆ ಅನೇಕ  ಪ್ರತ್ಯೇಕತಾವಾದಿ ಮುಖಂಡರುಗಳ ನಿವಾಸಗಳಲ್ಲಿ ಶೋಧ ನಡೆಸಿದ್ದರು.
ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ ಮುಖಂಡ ಯಾಸೀನ್ ಮಲ್ಲಿಕ್, ಸಬೀರ್ ಶಾ,  ಜಾಫರ್ ಭಟ್, ಮಸರತ್ ಅಲಂ ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು. ಮಿರ್ ವೈಜ್ ಹಾಗೂ ಸೆಹ್ರಿ ಮತ್ತಿತರ ಮುಖಂಡರನ್ನು ಕೆಲಕಾಲ ಜೈಲಿಗಟ್ಟಲಾಗಿತ್ತು.
ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ,ಸರ್ಕಾರಿ ಶಾಲೆಗಳಿಗೆ ಬೆಂಕಿ ಮತ್ತಿತರ ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು ಯಾರು ನೀಡುತ್ತಿದ್ದರು ಎಂಬುದರ ಬಗ್ಗೆ ಪತ್ತೆ ಹಚ್ಚುವ ನಿಟ್ಟಿನಲ್ಲಿ ಎನ್ ಐಎ ತನಿಖೆ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com