ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ)ಗೆ 13 ಸಾವಿರ ಕೋಟಿ ರು. ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರದ ಉದ್ಯಮಿ ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಕಾನೂನು ಪ್ರಕ್ರಿಯೆ ಆರಂಭಿಸುವಂತೆ ಯುನೈಟೆಡ್ ಕಿಂಗ್ ಡಮ್ ಗೃಹ ಕಾರ್ಯದರ್ಶಿಗಳು ಲಂಡನ್ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಈ ಕುರಿತು ಯುಕೆ ಗೃಹ ಕಾರ್ಯದರ್ಶಿ ಸಜಿದ್ ಜಾವಿದ್ ಅವರು ನಮಗೆ ಮಾಹಿತಿ ನೀಡಿದ್ದು, ಎರಡು ದಿನಗಳ ಹಿಂದೆಯೇ ನೀರವ್ ಮೋದಿಯ ಪ್ರಕರಣವನ್ನು ಲಂಡನ್ ಕೋರ್ಟ್ ಗೆ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಪಿಎನ್ ಬಿ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ ಅವರನ್ನು ಗಡಿಪಾರು ಮಾಡಿ, ಭಾರತಕ್ಕೆ ಹಸ್ತಾಂತರಿಸುವಂತೆ ಯುನೈಟೆಡ್ ಕಿಂಗ್ ಡಮ್ ಗೆ ಭಾರತದಿಂದ ಅಧಿಕೃತ ಮನವಿ ಸಲ್ಲಿಸಲಾಗಿದೆ.
ಈ ಮಧ್ಯೆ, ನೀರವ್ ಮೋದಿ ಲಂಡನ್ ನಲ್ಲಿಯೇ ಇದ್ದು, ವೆಸ್ಟ್ ಎಂಡ್ ನಲ್ಲಿ 80 ಲಕ್ಷ ಪೌಂಡ್ ಬೆಲೆಯ ಐಶಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದು ಅಲ್ಲಿ ಹೊಸ ವಜ್ರದ ಉದ್ಯಮವನ್ನು ಆರಂಭಿಸಿದ್ದಾನೆ ಎಂದು ದ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.