
ನವದೆಹಲಿ: ಇಥಿಯೋಪಿಯಾ ವಿಮಾನ ಪತನ ಹಿನ್ನೆಲೆಯಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳನ್ನು ಬಳಸುತ್ತಿರುವ ದೇಶದ ವಿಮಾನಯಾನ ಸಂಸ್ಥೆಗಳಾದ ಜೆಟ್ ಏರ್ ವೇಸ್ ಹಾಗೂ ಸ್ಪೈಸ್ ಜೆಟ್ ಸಂಸ್ಥೆಗಳಿಗೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಸಲಹೆ ನೀಡಿದೆ.
ಈ ವಿಮಾನಗಳನ್ನು ಚಲಾಯಿಸುವ ಪೈಲಟ್ ಕನಿಷ್ಠ 1 ಸಾವಿರ ಗಂಟೆಗಳ ಕಾಲ ವಿಮಾನ ಹಾರಾಟದ ಅನುಭವ ಹೊಂದಿರಬೇಕು ಎಂಬುದನ್ನು ಡಿಜಿಸಿಎ ನಿರ್ದೇಶಿಸಿದೆ.
ಇಥಿಯೋಪಿಯಾದಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಪತನಗೊಂಡು 157 ಜನರು ಮೃತಪಟ್ಟ ಪರಿಣಾಮ ಹಲವು ರಾಷ್ಟ್ರಗಳು ಬೋಯಿಂಗ್ ವಿಮಾನದ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದು, ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದೆ.
ಡಿಜಿಸಿಎ ನಿರಂತರವಾಗಿ ಪರಿಸ್ಥಿತಿಯ ನಿರ್ವಹಣೆ ಮಾಡಲಿದ್ದು, ಅಪಘಾತ ತನಿಖಾ ಏಜೆನ್ಸಿಯಿಂದ ಪಡೆದ ಮಾಹಿತಿ ಆಧಾರದಲ್ಲಿ ಇನ್ನಿತರ ಕಾರ್ಯಾಚರಣೆ, ಮೇಲ್ವಿಚಾರಣೆ ಕ್ರಮ , ನಿರ್ಬಂಧಗೊಳಿಸುವುದನ್ನು ಕೈಗೊಳ್ಳಲಾಗುವುದು ಎಂದು ನಿಯಂತ್ರಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಹೊಸ ನಿರ್ದೇಶನಗಳು ಇಂದಿನಿಂದ ಜಾರಿಗೆ ಬರಲಿದೆ ಎಂಬುದು ತಿಳಿದುಬಂದಿದೆ.
Advertisement