ಐಐಟಿ ಪದವೀಧರನಿಂದ ದೇಶದ ರಕ್ಷಣಾ ಸಚಿವರವರೆಗೆ ಮನೋಹರ್ ಪರ್ರಿಕರ್ ನಡೆದುಬಂದ ಹಾದಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಹುದ್ದೆಯಿಂದ ದೇಶದ ರಕ್ಷಣಾ ಸಚಿವರಾಗಿ ಮತ್ತು ಗೋವಾ...
ಮನೋಹರ್ ಪರ್ರಿಕರ್
ಮನೋಹರ್ ಪರ್ರಿಕರ್
ಪಣಜಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಹುದ್ದೆಯಿಂದ ದೇಶದ ರಕ್ಷಣಾ ಸಚಿವರಾಗಿ ಮತ್ತು ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ ಬೆಳೆದ ಮನೋಹರ್ ಪರ್ರಿಕರ್ ಕರಾವಳಿ ತೀರದ ರಾಜ್ಯಗಳಲ್ಲಿ ರಾಜಕೀಯವಾಗಿ ಪಕ್ಕದ ಮನೆಯ ಸಭ್ಯ ವ್ಯಕ್ತಿಯ ಇಮೇಜ್ ಸೃಷ್ಟಿಸಿಕೊಂಡವರು.
ಗೋವಾ ರಾಜ್ಯದಲ್ಲಿ 4 ಬಾರಿ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಪರ್ರಿಕರ್, ನರೇಂದ್ರ ಮೋದಿ ಸರ್ಕಾರದ ಮೂರು ವರ್ಷಗಳ ಅವಧಿಗೆ ರಕ್ಷಣಾ ಸಚಿವರಾಗಿದ್ದರು. ಬಿಜೆಪಿಯಿಂದ ಆಚೆಗೆ ರಾಜಕೀಯದಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡು ಜನಪ್ರಿಯರಾಗಿದ್ದರು.
ಗೋವಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಬಲ ಶಕ್ತಿಯೆಂದರೆ ಮನೋಹರ್ ಪರ್ರಿಕರ್ ಎಂದೇ ಹೇಳಬಹುದು. ಅದರಿಂದಾಗಿಯೇ ಅಷ್ಟು ಅಸೌಖ್ಯದ ನಡುವೆಯೂ ತಮ್ಮ ಜೀವನದ ಕೊನೆಕಾಲದವರೆಗೂ ಮುಖ್ಯಮಂತ್ರಿಯಾಗಿಯೇ ಉಳಿದಿದ್ದರು. ಅವರ ಅನಾರೋಗ್ಯದ ನಡುವೆ ಬೇರೊಬ್ಬ ನಾಯಕನನ್ನು ಮುಖ್ಯಮಂತ್ರಿ ಮಾಡುವ ಮನಸ್ಸು ಪಕ್ಷದ ಕೇಂದ್ರ ನಾಯಕರು ಮಾಡಿರಲಿಲ್ಲ.
ಮನೋಹರ್ ಪರ್ರಿಕರ್ ಹುಟ್ಟಿದ್ದು 1955ರ ಡಿಸೆಂಬರ್ 13ರಂದು ಮಧ್ಯಮ ವರ್ಗದ ಕುಟುಂಬವೊಂದರಲ್ಲಿ. ಆರ್ ಎಸ್ ಎಸ್ ಪ್ರಚಾರಕರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಐಐಟಿ ಮುಂಬೈಯಲ್ಲಿ ಎಂಜಿನಿಯರಿಂಗ್ ಪದವಿ ಗಳಿಸಿದ ನಂತರವೂ ಆರ್ ಎಸ್ಎಸ್ ನಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. ಆರ್ ಎಸ್ಎಸ್ ಜೊತೆಗಿನ ನಂಟನ್ನು ಅವರೆಂದೂ ಬಿಟ್ಟಿರಲಿಲ್ಲ.
ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ಪರ್ರಿಕರ್ ರಕ್ಷಣಾ ಸಚಿವರಾಗಿದ್ದಾಗಲೇ. ಗೋವಾದ ಅತ್ಯಂತ ಹಳೆಯ ದೊಡ್ಡ ಸ್ಥಳೀಯ ಪಕ್ಷ ಮಹಾರಾಷ್ಟ್ರವಾಡಿ ಗೊಮಂಟಕ್ ಪಾರ್ಟಿ(ಎಂಜಿಪಿ)ಯ ಬೆಳವಣಿಗೆಗೆ ಬ್ರೇಕ್ ಹಾಕಿ ಬಿಜೆಪಿ ಗೋವಾದಲ್ಲಿ ಬೆಳೆಯಲು ಕಾರಣಕರ್ತರೇ ಪರ್ರಿಕರ್. ಹೀಗಾಗಿ ಗೋವಾ ರಾಜಕೀಯ ಎಂದರೆ ಮನೋಹರ್ ಪರ್ರಿಕರ್ ಎಂದರೆ ತಪ್ಪಾಗಲಾರದು.
ಪರ್ರಿಕರ್ ಅವರು ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು 1994ರಲ್ಲಿ ಪಣಜಿ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಗೆದ್ದು ಬಂದರು. ಜೂನ್ 1999ರಿಂದ ಅದೇ ವರ್ಷ ನವೆಂಬರ್ ವರೆಗೆ ವಿರೋಧ ಪಕ್ಷದ ಸ್ಥಾನದಲ್ಲಿದ್ದರು. ಕಾಂಗ್ರೆಸ್ ವಿರುದ್ಧ ಭಾಷಣ ಮಾಡುವುದರಲ್ಲಿ ಅತ್ಯಂತ ಜನಪ್ರಿಯರು. 2000ನೇ ಇಸವಿಯಲ್ಲಿ ಗೋವಾ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ನೇಮಕಗೊಂಡರು. 2002ರ ಫೆಬ್ರವರಿ 27ರಂದು ಅವರ ಮುಖ್ಯಮಂತ್ರಿ ಅಧಿಕಾರಾವಧಿ ಕೊನೆಗೊಂಡಿತ್ತು. ಜೂನ್ 5, 2002ರಲ್ಲಿ ಮತ್ತೆ ಮರು ಆಯ್ಕೆಯಾಗಿ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾದರು.
ಜೂನ್ 29, 2005ರಲ್ಲಿ ತಮ್ಮ ಸರ್ಕಾರ ಬಹುಮತ ಕಳೆದುಕೊಂಡಾಗ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಕಾಂಗ್ರೆಸ್ ನ ಪ್ರತಾಪ್ ಸಿನ್ಹ ರಾಣೆ ಮುಖ್ಯಮಂತ್ರಿಯಾದರು.2007ರಲ್ಲಿ ಪರ್ರಿಕರ್ ನೇತೃತ್ವದ ಬಿಜೆಪಿ ಕಾಂಗ್ರೆಸ್ ನೇತೃತ್ವದ ದಿಗಂಬರ್ ಕಾಮತ್ ಅವರನ್ನು ಸೋಲಿಸಿ ಮತ್ತೆ ಮುಖ್ಯಮಂತ್ರಿಯಾದರು.2012ರಲ್ಲಿ ಪರ್ರಿಕರ್ ಜನಪ್ರಿಯತೆ ಉತ್ತುಂಗದಲ್ಲಿತ್ತು. ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 21 ಇದ್ದಿದ್ದು 40ಕ್ಕೇರಿತ್ತು.
2014ರಲ್ಲಿ ಲೋಕಸಭೆ ಚುನಾವಣೆ ಜೊತೆಗೆ ಗೋವಾದಲ್ಲಿ ಕೂಡ ಬಿಜೆಪಿ ಗೆಲುವು ಸಾಧಿಸಿ ಪರ್ರಿಕರ್ ಮುಖ್ಯಮಂತ್ರಿಯಾದರು.ನರೇಂದ್ರ ಮೋದಿಯವರು ಪ್ರಧಾನಿಯಾದಾಗ ಮನೋಹರ್ ಪರ್ರಿಕರ್ ಗೆ ರಕ್ಷಣಾ ಸಚಿವ ಸ್ಥಾನ ನೀಡಿದರು. 2017ರ ಮಾರ್ಚ್ ತಿಂಗಳವರೆಗೆ ರಕ್ಷಣಾ ಸಚಿವರಾಗಿದ್ದರು. ಗೋವಾದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲಿಲ್ಲ. ಆಗ ಒಂದೆರಡು ಪಕ್ಷಗಳ ಬೆಂಬಲ ಪಡೆದು ಕಾಂಗ್ರೆಸ್ ನ ತೀವ್ರ ವಿರೋಧದ ನಡುವೆ ಬಿಜೆಪಿ ಸರ್ಕಾರ ರಚಿಸಿಯೇ ಬಿಟ್ಟಿತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮನೋಹರ್ ಪರ್ರಿಕರ್ ರಾಜ್ಯಕ್ಕೆ ಮರಳಿ ಮುಖ್ಯಮಂತ್ರಿ ಪದವಿ ಅಲಂಕರಿಸಬೇಕಾಗಿ ಬಂತು. ರಕ್ಷಣಾ ಸಚಿವ ಹುದ್ದೆ ತ್ಯಜಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com