ಹಿರಿಯ ವಿದ್ಯಾರ್ಥಿಗಳಿಂದ 7ನೇ ತರಗತಿ ವಿದ್ಯಾರ್ಥಿ ಕೊಲೆ, ಕ್ಯಾಂಪಸ್ ನಲ್ಲೇ ಶವವನ್ನು ಹೂತಿಟ್ಟ ಶಾಲಾಡಳಿತ!
ವಸತಿ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಹಿರಿಯ ಸಹಪಾಠಿಗಳು ಸೇರಿ ಹಿಂಸೆ ಕೊಟ್ಟು ಹೊಡೆದು ಕೊಂದಿರುವ ಘಟನೆ ಉತ್ತರಾಖಂಡ್ ನ ರಿಷಿಕೇಶ್ ಸಮೀಪ ನಡೆದಿದೆ.
ಡೆಹರಾಡೂನ್: ವಸತಿ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಹಿರಿಯ ಸಹಪಾಠಿಗಳು ಸೇರಿ ಹಿಂಸೆ ಕೊಟ್ಟು ಹೊಡೆದು ಕೊಂದಿರುವ ಘಟನೆ ಉತ್ತರಾಖಂಡ್ ನ ರಿಷಿಕೇಶ್ ಸಮೀಪ ನಡೆದಿದೆ. ಇದೇ ವೇಳೆ ಶಾಲೆಯಲ್ಲಿ ನಡೆದ ಕೊಲೆಯನ್ನು ಮುಚ್ಚಿ ಹಾಕಲು ಶಾಲಾ ಅಧಿಕಾರಿಗಳು ಮುಂದಾಗಿದ್ದು ಶಾಲಾ ಆವರಣದಲ್ಲೇ ವಿದ್ಯಾರ್ಥಿಯ ಶವವನ್ನು ದಫನ್ ಮಾಡಿದ್ದಾರೆ.
ಈ ಅಮಾನುಷ ಘಟನೆ ಮಾರ್ಚ್ 1 ರಂದು ನಡೆದಿತ್ತಾದರೂ ಇಷ್ಟು ದಿನ ಬೆಳಕಿಗೆ ಬಂದಿರಲಿಲ್ಲ. ಇನ್ನು ತಮ್ಮ ಮಗ ಶಾಲೆಯಲ್ಲೇ ಕೊಲೆಯಾಗಿದ್ದಾನೆ ಎನ್ನುವುದು ಹಾಪುರ್ ನಿವಾಸಿಗಳಾದ ಅವನ ಪೋಷಕರಿಗೆ ಸಹ ತಿಳಿದಿರಲಿಲ್ಲ. ಶಾಲಾ ಆಡಳಿತ ವಿದ್ಯಾರ್ಥಿಯ ಪೋಷಕರಿಗೆ ಸಹ ಈ ವಿಚಾರವನ್ನು ತಿಳಿಸದೆ ವಂಚಿಸಿತ್ತು.
ಕೊಲೆಯಾಗಿರುವ ವಿದ್ಯಾರ್ಥಿಯನ್ನು ವಾಸು ಯಾದವ್ ಎಂದು ಗುರುತಿಸಲಾಗಿದ್ದು ಆತನನ್ನು ಅದೇ ಶಾಲೆಯ ಹಿರಿಯ ವಿದ್ಯಾರ್ಥಿಗಳು ಕ್ರಿಕೆಟ್ ಬ್ಯಾಟ್, ವಿಕೆಟ್ಗಳಿಂದ ಹಲ್ಲೆ ನಡೆಸಿ ಕೊಂದು ಹಾಕಿದ್ದರು.
ಘಟನೆ ವಿವರ
ವಾಸು ವ್ಯಾಸಂಗ ಮಾಡುತ್ತಿದ್ದ ಶಾಲೆ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ತೆರಳಿದ್ದ ವೇಳೆ ವಾಸು ಕೆಲ ಬಿಸ್ಕೆಟ್ ಕದ್ದಿದ್ದಾನೆ ಇದಕ್ಕಾಗಿ ಶಾಲಾ ಶಿಕ್ಷಕರು ಎಲ್ಲಾ ಮಕ್ಕಳೂ ಶಾಲೆಯ ಕ್ಯಾಂಪಸ್ ನಲ್ಲೇ ಉಳಿಯಬೇಕು ಎಂದು ಶಿಕ್ಷೆ ನೀಡಿದ್ದರು.ಇದರಿಂದ ಕೋಪೋದ್ರಿಕ್ತರಾದ 12ನೇ ತರಗತಿಯ ವಿದ್ಯಾರ್ಥಿಗಳು ವಾಸುವಿಗೆ ಕಿರುಕುಳ ನೀಡಿದ್ದಲ್ಲದೆ ವಾರ್ಡನ್ ಬರುವವರೆಗೆ ಆತನ ಮೇಲೆ ನಿರಂತರ ಹಲ್ಲೆ ನಡೆಸಿದ್ದಾರೆ. ಆ ನಂತರ ತಡವಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ವೇಳೆ ವಾಸು ಮೃತಪಟ್ಟಿದ್ದಾನೆ ಎನ್ನುವುದು ತಿಳಿದಿದೆ. ನಂತರ ಶಾಲಾ ಆಡಳಿತ ಶಾಲೆಯ ಆವರಣದಲ್ಲೇ ವಿದ್ಯಾರ್ಥಿಯ ಶವವನ್ನು ದಫನ್ ಮಾಡಿದೆ.
ಪ್ರಕರಣ ಸಂಬಂಧ ಇಬ್ಬರು ವಿದ್ಯಾರ್ಥಿಗಳು ಸೇರಿ ಐವರನ್ನು ಪೋಲೀಸರು ಬಂಧಿಸಿದ್ದಾರೆ. ಶಾಲಾ ವಾರ್ಡನ್, ದೈಹಿಕ ಶಿಕ್ಷಕ ಹಾಗೂ ಮ್ಯಾನೇಜರ್ ಬಂಧಿತರಾಗಿದ್ದಾರೆ. ಇನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪ್ರಕರಣದ ಕುರಿತು ವಿಶೇಷ ಕಾಳಜಿ ತೆಗೆದುಕೊಂಡ ಕಾರಣ ಘಟನೆ ಬೆಳಕು ಕಂಡಿದೆ.