30 ವರ್ಷಗಳ ಬಳಿಕ ಕಣಿವೆ ರಾಜ್ಯಕ್ಕೆ ಮರಳಿದ ಕಾಶ್ಮೀರಿ ಪಂಡಿತ ಕುಟುಂಬ

ಉಗ್ರರ ಉಪಟಳದಿಂದ 30 ವರ್ಷಗಳ ಕಾಲ ಕಣಿವೆಯಿಂದ ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತ ಕುಟುಂಬವೊಂದು ಇದೀಗ ಕಣಿವೆ ರಾಜ್ಯಕ್ಕೆ ಮರಳಿ ಬದುಕು ಕಟ್ಟಿಕೊಳ್ಳಲು....
ರೋಶನ್ ಲಾಲ್ ಮಾವಾ
ರೋಶನ್ ಲಾಲ್ ಮಾವಾ
ಶ್ರೀನಗರ: ಉಗ್ರರ ಉಪಟಳದಿಂದ 30 ವರ್ಷಗಳ ಕಾಲ ಕಣಿವೆಯಿಂದ ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತ ಕುಟುಂಬವೊಂದು ಇದೀಗ ಕಣಿವೆ ರಾಜ್ಯಕ್ಕೆ ಮರಳಿ ಬದುಕು ಕಟ್ಟಿಕೊಳ್ಳಲು ಹೊರಟಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಹಾಗೂ ಆಶಾದಾಯಕ ಸಂಗತಿಯಾಗಿದೆ. 
ಗುಂಡೇಟು ತಿಂದು ಬದುಕುವ ಭರವಸೆ ಕಳೆದುಕೊಡು 30 ವರ್ಷಗಳ ಕಾಲ ಕಣಿವೆಯಿಂದ ಹೊರಗೆ ಹೋಗಿದ್ದ ರೋಶನ್ ಲಾಲ್ ಮಾವಾ ಅವರು ಇಂದು ತಮ್ಮ ವ್ಯಾಪಾರವನ್ನು ಮತ್ತೆ ಆರಂಭಿಸುತ್ತಿದ್ದಂತೆ ಸ್ಥಳೀಯರ ಸಹಕಾರ-ಬೆಂಬಲದಿಂದಾಗಿ ಅವರ ಹೃದಯ ತುಂಬಿ ಬಂದಿದೆ.
ಏತನ್ಮಧ್ಯೆ, ತನ್ನ ಹಳೆಯ ಸ್ನೇಹಿತರನ್ನೂ ಒಳಗೊಂಡಂತೆ ನೂರಾರು ಸ್ಥಳೀಯರು ಶ್ರೀನಗರದಲ್ಲಿರುವ ಗಾಡ್ ಕೋಚೆ ಮಾರುಕಟ್ಟೆಯಲ್ಲಿ ರೋಶನ್ ಲಾಲ್ ಮಾವಾ ಅವರ ಅಂಗಡಿಗೆ ಭೇಟಿ ನೀಡಿ ಅವರಿಗೆ ನೈತಿಕ ಬೆಂಬಲ ಸೂಚಿಸಿದರು.
1990 ರಲ್ಲಿ ಅಪರಿಚಿತ ಬಂದೂಕುಧಾರಿ ಲಾಲ್ ಮಾವಾ ಅಂಗಡಿಯಲ್ಲಿ ಗುಡುಹಾರಿಸಿ ಮಾವಾ ಅವರನ್ನು ಗಾಯಗೊಳಿಸಿದ್ದ. ಇದರಿಂದ ಬೇಸರಗೊಂಡ ಅವರು ಮೊದಲಿಗೆ ಜಮ್ಮುವಿಗೆ ತೆರಳಿ ನಂತರ ಅಲ್ಲಿಂದ  ದೆಹಲಿಗೆ ತೆರಳಿ ಹೇಗೋ ವ್ಯಾಪಾರ ನಡೆಸಿ ಜೀವನ ಮಾಡಿಕೊಂಡಿದ್ದರು. 30 ವರ್ಷಗಳ ಬಳಿಕ ಅವರು ಕಣಿವೆಗೆ ಮತ್ತೆ ಮರಳಿದ್ದಾರೆ. ಕಹಿ ನೆನಪುಗಳನ್ನು ಮರೆಯುತ್ತ ಹೊಸ ಬದುಕು ಕಟ್ಟಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದಾರೆ. 
ದೆಹಲಿಗೆ ಸ್ಥಳಾಂತರಗೊಂಡ ನಂತರ ಅವರು ಮಸಾಲೆ ಅಂಗಡಿಗಳನ್ನು 'ನಂದಲಾಲ್ ಮಹಾರಾಜ್ ಕೃಷನ್' ಹಳೆಯ ಹೆಸರಿನೊಂದಿಗೆ ಪ್ರಾರಂಭಿಸಿದ್ದರು. 
ತಮ್ಮ ಪೂರ್ವಜರು ವಾಸಿಸುತ್ತಿದ್ದ ಸ್ಥಳದಲ್ಲಿ ಪುನರ್ವಸತಿ, ವ್ಯಾಪಾರ ವಹಿವಾಟು ಮಾಡುತ್ತಿರುವುದು ತಮಗೆ ಬಹಳ ಇಷ್ಟವಾಗಿದೆ. ಹೀಗಾಗಿ ನಾನು ಪೂರ್ವಜರ ವಾಸಸ್ಥಳಕ್ಕೆ ಮರಳಿದ್ದೇನೆ. ದೆಹಲಿ ವ್ಯವಹಾರ ನಡೆಸಲು ಉತ್ತಮವಾದ ಸ್ಥಳವಾಗಿದ್ದರೂ ನಾನು ಕಾಶ್ಮೀರಕ್ಕೆ ಮರಳಿ ಇಲ್ಲಿಯೇ ನೆಲೆಸಬೇಕು ಎಂದು ಸದಾ ಕಾಲ ಹಂಬಲ ಹೊಂದಿದ್ದೆ ಎಂದು ಅವರು ಬಹಳ ಅಭಿಮಾನದಿಂದ ಹೇಳಿಕೊಡಿದ್ದಾರೆ. 
ಕಾಶ್ಮೀರಿ ಪಂಡಿತರಾದ ಅವರು ಹಲವು ತಿಂಗಳುಗಳನ್ನು ಶ್ರೀನಗರದಲ್ಲಿ ತಮ್ಮ ಪೂರ್ವಜರ ಮನೆಯಲ್ಲಿ ಕಳೆದಿದ್ದು, ಅಲ್ಲಿ ಅವರ ಮಗ ವಾಸಿಸುತ್ತಿದ್ದಾರೆ. 
90ರ ದಶಕದ ದಾಳಿಯ ಬಗ್ಗೆ ಮಾತನಾಡಿದ ಅವರು, ಅಪರಿಚಿತ ಯುವಕ ತನ್ನ ಅಂಗಡಿಗೆ ಬಂದು ಗುಂಡು ಹಾರಿಸಿದ. ನನಗೆ ನಾಲ್ಕು ಗುಂಡುಗಳು ತಾಕಿದ್ದವು. ಹೊಟ್ಟೆ ಮತ್ತು ಒಂದು ಭುಜದೊಳಗೆ ಗುಂಡು ತಗಲಿತ್ತು. ಆದರೂ, ದೇವರ ಕೃಪೆಯಿಂದ ನಾನು ಇನ್ನೂ ಬದುಕುಳಿದಿದ್ದೇನೆ ಎಂದು ಅವರು ಹಳೆಯ ಘಟನೆಯನ್ನು ಮೆಲುಕು ಹಾಕಿದರು. 
ನಾನು ನನ್ನ ಅಂಗಡಿಯನ್ನು ಪುನರಾರಂಭಿಸಿದಾಗ ದೊಡ್ಡ ಸಂಖ್ಯೆಯಲ್ಲಿ ಬರುವ ಜನರನ್ನು ನೋಡಿ ಹೃದಯ ತುಂಬಿ ಬಂತು. ಪ್ರತಿಯೊಬ್ಬರೂ ಪ್ರೀತಿ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.
ಕಾಶ್ಮೀರಿ ಪಂಡಿತರು ಕಣಿವೆಗೆ ಮರಳಲು ಪ್ರಸಕ್ತ ಸನ್ನಿವೇಶವು ಅನುಕೂಲಕರವಾಗಿದೆ . ಶ್ರೀನಗರದಲ್ಲಿ ಅತ್ಯಂತ ಸೂಕ್ತವಾದ ಮಾರುಕಟ್ಟೆಯಲ್ಲಿ ಅಂಗಡಿಯನ್ನು ಪುನಃ ತೆರೆದಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದು ಲಾಲ್ ಮಾವಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com