ಜೈಪುರ:ರಾಜಸ್ತಾನ ರಾಜಧಾನಿ ಜೈಪುರದ ವಾರ್ಷಿಕ ಪುಷ್ಕರ ಮೇಳದಲ್ಲಿ ಮುರ್ರಾ ತಳಿಯ ಕೋಣ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. 1,300 ಕೆಜಿ ತೂಕದ ಈ ಕೋಣದ ಹೆಸರು ಭೀಮ. ಇದರ ವಯಸ್ಸು ಆರೂವರೆ ವರ್ಷ. ಇದರ ಬೆಲೆ ಕೇಳಿದರೆ ನೀವು ಹೌಹಾರುತ್ತೀರ. ಬರೋಬ್ಬರಿ 14 ಕೋಟಿ ರೂಪಾಯಿ. ಈ ಜಾತ್ರೆಯಲ್ಲಿ ಇದು ಭಾಗವಹಿಸುತ್ತಿರುವುದು ಎರಡನೇ ಬಾರಿ.
ಈ ವಿಶೇಷ ಕೋಣವನ್ನು ಜೋಧಪುರದಿಂದ ತರಲಾಗಿದ್ದು ಅದರ ಮಾಲೀಕ ಜವಾಹರ್ ಲಾಲ್ ಜಂಗಿಡ್, ಪುತ್ರ ಅರವಿಂದ್ ಜಂಗಿಡ್ ಮತ್ತು ಇತರ ಕುಟುಂಬ ಸದಸ್ಯರು ಒಟ್ಟಾಗಿ ಕರೆದುಕೊಂಡು ಬಂದಿದ್ದಾರೆ.
ಮೊದಲ ದಿನವೇ ಈ ಕೋಣದ ಜೊತೆ ನಿಂತುಕೊಂಡು ಜಾತ್ರೆಗೆ ಬಂದವರೆಲ್ಲಾ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಈ ಕೋಣವನ್ನು ಸಾಕಲು ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿ ಬೇಕಾಗುತ್ತದಂತೆ. ಕೋಣಕ್ಕೆ ತಿನ್ನಲು ಆಹಾರವಾಗಿ ಪ್ರತಿನಿತ್ಯ ಒಂದು ಕೆಜಿ ತುಪ್ಪ, ಅರ್ಧ ಕೆಜಿ ಬೆಣ್ಣೆ, 200 ಗ್ರಾಮ್ ಜೇನುತುಪ್ಪ, 25 ಲೀಟರ್ ಹಾಲು ಮತ್ತು ಒಂದು ಕೆಜಿ ಗೇರುಬೀಜ ಮತ್ತು ಬಾದಾಮಿ ನೀಡಲಾಗುತ್ತಿದೆಯಂತೆ.
ಜಾತ್ರೆಗೆ ಬರುವ ಮೊದಲು 14 ಕೋಟಿಗೆ ಕೇಳಿದ್ದರಂತೆ. ಆದರೆ ನಮಗೆ ಮಾರಾಟ ಮಾಡಲು ಇಷ್ಟವಿಲ್ಲ. ಇಲ್ಲಿಗೆ ಕೂಡ ನಾವು ಮಾರಾಟಕ್ಕೆ ತಂದಿಲ್ಲ. ಮುರ್ರಾ ತಳಿಯನ್ನು ಪ್ರಚುರಪಡಿಸಲು ಇಲ್ಲಿಗೆ ಕರೆತಂದಿದ್ದೇವೆ ಎಂದರು ಅರವಿಂದ್.
Advertisement