ನವದೆಹಲಿ: ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಏನೇ ತೀರ್ಪು ನೀಡಿದರೂ ಅದನ್ನು ಸ್ವಾಗತಿಸುತ್ತೇವೆ ಎಂದು ಜಮೀಯತ್ ಉಲೇಮಾ ಎ ಹಿಂದ್ ಅಧ್ಯಕ್ಷ ಅರ್ಷದ್ ಮದನಿ ಅವರು ಬುಧವಾರ ಹೇಳಿದ್ದಾರೆ.
ಇತಿಹಾಸದ ಆಧಾರದ ಮೇಲೆ, ಯಾವುದೇ ಹಿಂದೂ ದೇವಸ್ಥಾನ ಕೆಡವಿ ಮಸೀದಿ ನಿರ್ಮಿಸಿಲ್ಲ ಎಂದು ಮುಸ್ಲಿಮರು ಹೇಳುತ್ತಿದ್ದಾರೆ. ಆದರೆ ನಾವು ನಮ್ಮ ನಿಲುವನ್ನು ಪುನರುಚ್ಚರಿಸುತ್ತಿದ್ದು, ಸತ್ಯ ಮತ್ತು ಪುರಾವೆಗಳ ಆಧಾರದ ಮೇಲೆ ಸುಪ್ರೀಂ ಕೋರ್ಟ್ ನೀಡುವ ತೀರ್ಪಿಗೆ ಬದ್ಧರಾಗಿರುತ್ತೇವೆ. ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಮತ್ತು ಮುಸ್ಲಿಮರು ಹಾಗೂ ಇತರೆ ನಾಗರಿಕರು ಸುಪ್ರೀಂ ತೀರ್ಪನ್ನು ಗೌರವಿಸಬೇಕು ಎಂದು ಮದನಿ ಅವರು ಪ್ರಕಟಣೆಯ ಮೂಲಕ ಕರೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಏನೇ ಬಂದರೂ, ಅದನ್ನು ಗಂಭೀರವಾಗಿ ಪರಿಗಣಿಸದೇ ಕೋಮು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಮದನಿ ಒತ್ತಿ ಹೇಳಿದ್ದಾರೆ. ಅಲ್ಲದೆ ಅಯೋಧ್ಯೆ ತೀರ್ಪಿನ ಬಳಿಕ ಅಲ್ಪ ಸಂಖ್ಯಾತರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ತಮ್ಮ ನಿವೃತ್ತಿಯ ನವೆಂಬರ್ 17ಕ್ಕೂ ಮುನ್ನವೇ ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ಜಮೀನು ವಿವಾದಕ್ಕೆ ಸಂಬಂಧಿಸಿದ ತೀರ್ಪನ್ನು ಪ್ರಕಟಿಸುವ ನಿರೀಕ್ಷೆ ಇದೆ.
Advertisement