ದೇಶ ತೊರೆದ ನಿತ್ಯಾನಂದ: ಮಾಹಿತಿ ಇಲ್ಲ- ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಅಪಹರಣ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ದೇಶ ತೊರೆದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ನಿತ್ಯಾನಂದ, ರವೀಶ್ ಕುಮಾರ್
ನಿತ್ಯಾನಂದ, ರವೀಶ್ ಕುಮಾರ್

ನವದೆಹಲಿ: ಅಪಹರಣ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ದೇಶ ತೊರೆದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ನಿತ್ಯಾನಂದ ದೇಶ ತೊರೆದಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ,  ದೇಶದಿಂದ ಪಲಾಯನವಾಗುವ  ವ್ಯಕ್ತಿಯ ಸ್ಥಳ ವಿವರಗಳು ಅಗತ್ಯವಾಗಿರುತ್ತದೆ ಎಂದು ತಿಳಿಸಿದೆ. 

ಈ ಬಗ್ಗೆ ಗೃಹ ಸಚಿವಾಲಯ ಅಥವಾ ಗುಜರಾತ್ ಪೊಲೀಸರಿಂದ ಯಾವುದೇ ಅಧಿಕೃತ ಮಾಹಿತಿ ಪಡೆದಿಲ್ಲ.  ಪಲಾಯನವಾಗುವ ವ್ಯಕ್ತಿಯ ವಿವರ ಹಾಗೂ ಸ್ಥಳದ ವಿವರ ಅಗತ್ಯವಾಗಿರುತ್ತದೆ. ಆದರೆ, ನಿತ್ಯಾನಂದನ ಬಗ್ಗೆ ಈವರೆಗೂ ಇಂತಹ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಬುಧವಾರ ನಿತ್ಯಾನಂದ ಆಶ್ರಮದ ಇಬ್ಬರು ಮಹಿಳಾ ಆಡಳಿತಗಾರರನ್ನು ಅಹಮಾದಾಬಾದ್ ಪೊಲೀಸರು ಬಂಧಿಸಿದ್ದರು ಮತ್ತು ಅಲ್ಲಿ ಸೆರೆಯಲಿದ್ದ ಇಬ್ಬರು ಹುಡುಗರನ್ನು ಬಿಡುಗಡೆ ಮಾಡಲಾಗಿತ್ತು. 

ತಮ್ಮ ಮಗಳು ನಿತ್ಯಾನಂದನ ಆಶ್ರಮದಲ್ಲಿ ಸೆರೆಯಾಗಿದ್ದಾಳೆ ಎಂದು ಆರೋಪಿಸಿ ಜನಾರ್ಧನ್ ಶರ್ಮಾ ಎಂಬವರು ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಾಣಪ್ರಿಯಾ ಹಾಗೂ ಪ್ರಿಯತತ್ವ ಎಂಬ ನಿತ್ಯಾನಂದನ ಶಿಷ್ಯೆಯರನ್ನು ಪೊಲೀಸರು ಬಂಧಿಸಿದ್ದರು. 

ಹತಿಯಾಜನ್ ನಲ್ಲಿನ ನಿತ್ಯಾನಂದನ ಆಶ್ರಮದಲ್ಲಿ ಇಂದು ಬೆಳಗ್ಗೆ ಪರಿಶೀಲನೆ ನಡೆಸಿದ ಪೊಲೀಸರು, ಆತನ ಇಬ್ಬರು ಮಹಿಳಾ ಶಿಷ್ಯೆಯರನ್ನು ಬಂಧಿಸಿ,  ಲ್ಯಾಪ್ ಟಾಪ್, ಮೊಬೈಲ್ ಪೋನ್ ಮತ್ತಿತರ  ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ. ಟಿ. ಕಾಮರಿಯಾ, 42 ಮಾತ್ರೆ, 4 ಮೊಬೈಲ್ ಪೋನ್, 14 ಲ್ಯಾಪ್ ಟಾಪ್ ಗಳು, ಹಾರ್ಡ್ ಡ್ರೈವ್ಸ್ ಮತ್ತಿತರ ವಸ್ತುಗಳನ್ನು ಆಶ್ರಮದಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ. ಇವೆಲ್ಲವನ್ನು ವಿಚಾರಣೆಗಾಗಿ ಎಫ್ ಎಸ್ ಎಲ್ ವಿಭಾಗಕ್ಕೆ ಕಳುಹಿಸುತ್ತೇವೆ. ಆಶ್ರಮದಲ್ಲಿನ ಸಿಸಿಟಿವಿ ಹಾಗೂ ಡಿವಿಆರ್ ಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ. ಡಿಜಿಟಲ್ ಲಾಕರ್, ಮೂರು ಸಿಪಿಯು ಹಾಗೂ ಪೆನ್ ಡ್ರೈವ್ ಗಳನ್ನು ಪಡೆಯಲಾಗಿದೆ ಎಂದು ತಿಳಿಸಿದರು. 

ಅಪಹರಣಗೊಂಡಿರುವ ಹುಡುಗಿಯರ  ಸ್ಥಳ ಪತ್ತೆ ಕಷ್ಟಕರವಾಗಿದೆ. ಆದಾಗ್ಯೂ, ಅವರ ಪತ್ತೆಗಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. 

ಈ ಮಧ್ಯೆ  ಇಬ್ಬರು ಅಪ್ರಾಪ್ತೆಯರಿಗೆ ಮನೆ ಬಾಡಿಗೆ ನೀಡಿದ್ದ  ಬಕುಲ್ ಟಕ್ಕರ್ ಎಂಬವರ ವಿರುದ್ಧ ವಿವೇಕಾನಂದ ನಗರ ಪೊಲೀಸರು ದೂರು ದಾಖಲಿಸಿದ್ದಾರೆ. ಮನೆಯನ್ನು ಒಪ್ಪಂದದ ಅನ್ವಯ ಬಾಡಿಗೆ ನೀಡಿಲ್ಲ.ಹೀಗಾಗಿ ಇದು ಕೂಡಾ ಅಪರಾಧವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com