

ನವದೆಹಲಿ: ಹಾಸ್ಟೆಲ್ ನ ಶುಲ್ಕ ಮತ್ತು ಇತರ ಪಾವತಿ ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಬಿಡುಗಡೆ ಮಾಡಿದೆ. ಇದು ವಿದ್ಯಾರ್ಥಿಗಳ ಮೇಲೆ ಬೆದರಿಕೆಯೊಡ್ಡುವ ತಂತ್ರ ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಹೇಳಿದೆ.
ಹಾಸ್ಟೆಲ್ ಶುಲ್ಕ ಏರಿಕೆ ವಿಚಾರವಾಗಿಯೇ ತರಗತಿಗಳನ್ನು ಬಹಿಷ್ಕರಿಸಿ ಕಳೆದ ಹಲವು ದಿನಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು ಹಾಸ್ಟೆಲ್ ಮತ್ತು ಇತರ ಶುಲ್ಕಗಳನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಮೊತ್ತ 2.79 ಕೋಟಿ ರೂಪಾಯಿಗಳಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.
ಬಿಡುಗಡೆಯಾದ ಪಟ್ಟಿಯ ಪ್ರಕಾರ 17 ಹಾಸ್ಟೆಲ್ ಗಳ ಶುಲ್ಕ ವಿದ್ಯಾರ್ಥಿಗಳದ್ದು ಜುಲೈಯಿಂದ ಅಕ್ಟೋಬರ್ ವರೆಗೆ 2 ಕೋಟಿಯ 79 ಲಕ್ಷದ 33 ಸಾವಿರದ 874 ರೂಪಾಯಿಗಳಾಗಿದ್ದು ಜುಲೈಯಲ್ಲಿ 44 ಲಕ್ಷಕ್ಕೂ ಅಧಿಕ ಮತ್ತು ಆಗಸ್ಟ್ ತಿಂಗಳಲ್ಲಿ 55 ಲಕ್ಷ ರೂಪಾಯಿ ಬಾಕಿ ಉಳಿಕೆಯಿದೆ.ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಹಾಸ್ಟೆಲ್ ಶುಲ್ಕ ಬಾಕಿ ಉಳಿಕೆ 73 ಲಕ್ಷದ 71 ಸಾವಿರದ 808 ರೂಪಾಯಿ ಹಾಗೂ 1 ಕೋಟಿಯ 13 ಲಕ್ಷದ 95 ಸಾವಿರದ 634 ರೂಪಾಯಿಗಳಾಗಿದೆ.
ಇನ್ನೊಂದೆಡೆ ನಿನ್ನೆ ಮಾನವ ಸಂಪನ್ಮೂಲ ಸಚಿವಾಲಯ ನೇಮಿತ ಅತಿ ಉನ್ನತ ಸಮಿತಿಯನ್ನು ಭೇಟಿ ಮಾಡಿದ್ದ ಜವಾಹರ ಲಾಲ್ ನೆಹರೂ ಅಧ್ಯಾಪಕರ ಒಕ್ಕೂಟ(ಜೆಎನ್ ಯುಟಿಎ), ಏರಿಕೆ ಮಾಡಿದ ಹಾಸ್ಟೆಲ್ ಶುಲ್ಕವನ್ನು ಇಳಿಸುವಂತೆ ಮತ್ತು ವಿಶ್ವವಿದ್ಯಾಲಯ ಉಪ ಕುಲಪತಿಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.