
ನವದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿ ತರಾತುರಿಯಲ್ಲಿ ಸರ್ಕಾರ ರಚನೆ ಮಾಡಿದ ವಿಚಾರ ಲೋಕಸಭೆಯಲ್ಲಿ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಯಿತು. ಸಂಸತ್ತಿನ ಹೊರ ಭಾಗದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆದರೆ, ಲೋಕಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ಗಾಂಧಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ಗಾಂಧಿ, ನಾನು ಒಂದು ಪ್ರಶ್ನೆಯನ್ನೂ ಕೇಳುವುದಿತ್ತು. ಆದರೆ, ಅದನ್ನು ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ, ಏಕೆಂದರೆ, ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗಿದೆ ಎಂದರು.
ಎನ್ಸಿಪಿಯ ಅಜಿತ್ ಪವಾರ್ ಜೊತೆ ಸೇರಿ ಮಾಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ ವಿಚಾರದಲ್ಲಿ ಸೋನಿಯಾ ಗಾಂಧಿ ಮೌನ ಮುರಿದಿದ್ದಾರೆ. ಇಷ್ಟು ದಿನ ಈ ಬಗ್ಗೆ ಒಂದೂ ಮಾತನಾಡದ ಅವರು, ಇಂದು ಸಂಸತ್ತಿನ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರಜಾಪ್ರಭುತ್ವದ ಕೊಲೆ ಆಗಿದೆ ಎಂದರು.
ಕಾಂಗ್ರೆಸ್ ನಾಯಕರು ಲೋಕಸಭೆಯಲ್ಲಿ ತೀವ್ರ ಗದ್ದಲ ನಡೆಸಿದರು. ‘ಸಂವಿಧಾನದ ಹತ್ಯೆ ನಿಲ್ಲಿಸಿ’ ಎಂದು ಕೂಗಾಟ ನಡೆಸಿದರು. ಹೀಗಾಗಿ ಲೋಕಸಭೆಯನ್ನು 12 ಗಂಟೆಯವರೆಗೆ ಹಾಗೂ ರಾಜ್ಯಸಭೆಯನ್ನು 2 ಗಂಟೆವರೆಗೆ ಮುಂದೂಡಲಾಯಿತು.
Advertisement