ಗೋಡ್ಸೆ ದೇಶಭಕ್ತ ಹೇಳಿಕೆ: ಷರತ್ತುಬದ್ಧ ಕ್ಷಮೆಯಾಚಿಸಿದ ಪ್ರಗ್ಯಾ ಸಿಂಗ್ ಠಾಕೂರ್, ರಾಹುಲ್ ಗಾಂಧಿ ಹೇಳಿಕೆಗೆ ಆಕ್ಷೇಪ 

ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆ ಮತ್ತು ಪಕ್ಷದಿಂದ ಶಿಸ್ತುಕ್ರಮ ಎದುರಿಸಿದ ನಂತರ ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್  ಶುಕ್ರವಾರ ಲೋಕಸಭೆಯಲ್ಲಿ ಕ್ಷಮೆಯಾಚಿಸಿದ್ದಾರೆ.
ಪ್ರಗ್ಯಾ ಸಿಂಗ್ ಠಾಕೂರ್
ಪ್ರಗ್ಯಾ ಸಿಂಗ್ ಠಾಕೂರ್

ನವದೆಹಲಿ: ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆ ಮತ್ತು ಪಕ್ಷದಿಂದ ಶಿಸ್ತುಕ್ರಮ ಎದುರಿಸಿದ ನಂತರ ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್  ಶುಕ್ರವಾರ ಲೋಕಸಭೆಯಲ್ಲಿ ಕ್ಷಮೆಯಾಚಿಸಿದ್ದಾರೆ.


ಮಹಾತ್ಮಾ ಗಾಂಧಿಯವರನ್ನು ಕೊಂದ ನಾಥೂರಾಮ್ ಗೋಡ್ಸೆ ಅವರನ್ನು ದೇಶಭಕ್ತ ಎಂದು ಕರೆದಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ .


ಇಂದು ಸದನದಲ್ಲಿ ಕಲಾಪ ವೇಳೆ ಮಾತನಾಡಿದ ಅವರು, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಆದರೆ ನನ್ನ ಹೇಳಿಕೆಯನ್ನು ತಿರುಚಿ ಮತ್ತೊಂದು ರೀತಿಯಲ್ಲಿ ಬಿಂಬಿಸಲಾಗಿದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ತಪ್ಪಾಗಿ ವಿಶ್ಲೇಷಿಸಲಾಗಿದೆ ಎಂದು ಕೂಡ ಇದೇ ಸಂದರ್ಭದಲ್ಲಿ ಹೇಳಲು ಇಚ್ಛಿಸುತ್ತೇನೆ. ಇದು ಖಂಡನೀಯ ಎಂದರು.


ಅವರು ಮಾತು ಮುಂದುವರಿಸಿ, ಸಂದರ್ಭ ಮತ್ತು ವಿವರ ತಿಳಿಯದೆ ನನ್ನ ವಿರುದ್ಧ ಹರಿಹಾಯುವುದು ಮತ್ತು ನನ್ನನ್ನು ಭಯೋತ್ಪಾದಕಿ ಎಂದು ಕರೆಯುವುದು ಖಂಡನೀಯ. ಮಹಾತ್ಮಾ ಗಾಂಧೀಜಿಯವರು ಈ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಬಗ್ಗೆ ನನಗೆ ಅಗಾಧ ಗೌರವವಿದೆ. ಯಾರದ್ದಾದರೂ ಭಾವನೆಗಳಿಗೆ ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಿರಲಿ, ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಆಕ್ಷೇಪಿಸಿದರು.


ಸದನದ ಒಬ್ಬ ಸದಸ್ಯರು ನನ್ನನ್ನು ಭಯೋತ್ಪಾದಕಿ ಎಂದು ಉಲ್ಲೇಖಿಸಿದ್ದಾರೆ. ಈ ಸಂಸತ್ತಿನ ಸದಸ್ಯೆಯಾಗಿ ಮತ್ತು ಮಹಿಳೆಯಾಗಿ ನನ್ನ ಗೌರವಕ್ಕೆ ಅದರಿಂದ ಧಕ್ಕೆಯಾಗಿದೆ. ನನ್ನ ವಿರುದ್ಧ ಕೋರ್ಟ್ ನಲ್ಲಿ ಯಾವುದೇ ಆರೋಪ ಸಾಬೀತಾಗಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಬಲಿಪಶು ಮಾಡಲಾಗಿದೆ. ನನ್ನನ್ನು ಭಯೋತ್ಪಾದಕಿ ಎಂದು ಕರೆಯುವುದು ಅಕ್ಷಮ್ಯ ತಪ್ಪು. ಆ ರೀತಿ ಯಾರು ಕರೆದಿದ್ದಾರೆಯೋ ಅವರು ನ್ಯಾಯಾಂಗ ವ್ಯವಸ್ಥೆಗೆ ಅಗೌರವ ತೋರಿಸಿದಂತೆ ಎಂದು ಆಕ್ಷೇಪಿಸಿದರು.


ಪ್ರಗ್ಯಾ ಸಿಂಗ್ ಠಾಕೂರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಉಲ್ಲೇಖಿಸಿ ಈ ರೀತಿ ಹೇಳಿದ್ದರು. ಅವರು ನಿನ್ನೆ ಲೋಕಸಭೆಯಲ್ಲಿ ಭಯೋತ್ಪಾದಕಿ ಪ್ರಗ್ಯಾ ಭಯೋತ್ಪಾದಕ ಗೋಡ್ಸೆಯವರನ್ನು ದೇಶಭಕ್ತ ಎಂದು ಕರೆಯುತ್ತಾರೆ. ಭಾರತದ ಸಂಸತ್ತಿನಲ್ಲಿ ಇದು ಅತ್ಯಂತ ದುಃಖದ ದಿನ ಎಂದು ಹೇಳಿದ್ದರು.


ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಸದನದಲ್ಲಿ ಕಾಂಗ್ರೆಸ್ ಸಂಸದರು ತೀವ್ರ ಗದ್ದಲ, ಕೋಲಾಹಲ ಎಬ್ಬಿಸಿದರು. ಸಂಸದೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು. ಆಗ ಮಾತನಾಡಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಾಗ್ಯ ಸಿಂಗ್ ಅವರನ್ನು ಭಯೋತ್ಪಾದಕರು ಎಂದು ಕರೆದ ರಾಹುಲ್ ಗಾಂಧಿಯವರು ಸಹ ಕ್ಷಮೆ ಕೇಳಬೇಕು, ಸಾಧ್ವಿ ಪ್ರಾಗ್ಯ ಅವರನ್ನು ಭಯೋತ್ಪಾದಕಿ ಎಂದು ಕರೆಯುವುದು ಮಹಾತ್ಮಾ ಗಾಂಧಿಯವರ ಹತ್ಯೆಗಿಂತ ದುರದೃಷ್ಟಕರ ಸಂಗತಿ ಎಂದು ಹೇಳಿದರು.


ಈ ಮಧ್ಯೆ ಸಾಧ್ವಿ ಪ್ರಾಗ್ಯ ಸಿಂಗ್ ಠಾಕೂರ್ ಹೇಳಿಕೆಗೆ ತೀವ್ರ ವಿರೋಧ, ಖಂಡನೆ ಮತ್ತು ಸದನದಲ್ಲಿ ಪ್ರತಿಪಕ್ಷದ ಸದಸ್ಯರಿಂದ ಗದ್ದಲ ಉಂಟಾದ ಹಿನ್ನಲೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಸಂಬಂಧಪಟ್ಟವರನ್ನು ಸದನಕ್ಕೆ ಕರೆಸಿ ವಿವರಣೆ ಕೇಳಲಾಗುವುದು ಎಂದು ನಿನ್ನೆ ಲೋಕಸಭೆಯಲ್ಲಿ ಸಭಾಧ್ಯಕ್ಷ ಓಂ ಬಿರ್ಲಾ ಭರವಸೆ ನೀಡಿದ್ದರು. ಆದರೆ ಸಾಧ್ವಿ ಪ್ರಾಗ್ಯ ಅವರ ಹೆಸರನ್ನು ಪ್ರಸ್ತಾಪಿಸಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com