'ನಮ್ಮ ಮೇಲೆ ಕೇಸು ಹಾಕಿರುವುದು ಆತಂಕಕಾರಿ ಸಂಗತಿ'; ಎಫ್ಐಆರ್ ದಾಖಲು ಬಗ್ಗೆ ಸೆಲೆಬ್ರೆಟಿಗಳ ಪ್ರತಿಕ್ರಿಯೆ
ನವದೆಹಲಿ: ಭಾರತದ ಅಲ್ಲಲ್ಲಿ ಘಟಿಸುತ್ತಿರುವ ಗುಂಪು ಹತ್ಯೆ ಖಂಡಿಸಿ ಕಳೆದ ಜುಲೈ 23ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದ 49 ಸೆಲೆಬ್ರೆಟಿಗಳ ವಿರುದ್ಧ ಮುಜಾಫರ್ ಪುರ ಕೋರ್ಟ್ ನಲ್ಲಿ ಎಫ್ಐಆರ್ ದಾಖಲಿಸಿರುವುದು ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಈ ಬೆಳವಣಿಗೆ ಆತಂಕಕಾರಿ ಎಂಬ ಮಾತುಗಳು ಕೇಳಿಬರುತ್ತಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ. ನಿನ್ನೆ ತಿರುವನಂತಪುರದಲ್ಲಿ ಮಾತನಾಡಿದ ಹಿರಿಯ ಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣನ್, ಕೋರ್ಟ್ ಆದೇಶದಂತೆ ಎಫ್ಐಆರ್ ದಾಖಲಿಸಿರುವುದು ಆತಂಕಕಾರಿ ವಿಷಯ. ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದ್ದು ದೇಶದ ಕಾನೂನು-ಸುವ್ಯವಸ್ಥೆ ಮೇಲೆ ಸಂಶಯ ಮೂಡುತ್ತಿದೆ ಎಂದರು.
ಬಿಹಾರದ ಮುಜಾಫರ್ ಪುರ ಕೋರ್ಟ್ ನಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಗಣ್ಯ ವ್ಯಕ್ತಿಗಳಾದ ರಾಮಚಂದ್ರ ಗುಹಾ, ಮಣಿ ರತ್ನಂ, ಅಡೂರು ಗೋಪಾಲಕೃಷ್ಣ, ಶ್ಯಾಮ್ ಬೆನಗಲ್, ಸೌಮಿತ್ರ ಚಟರ್ಜಿ, ಅನುರಾಗ್ ಕಶ್ಯಪ್, ಶುಭಾ ಮುದ್ಗಲ್, ಅಪರ್ಣ ಸೇನ್ ಸೇರಿದಂತೆ 49 ಸೆಲೆಬ್ರಿಟಿಗಳ ವಿರುದ್ಧ ಕೇಸು ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ನಟ ಸೌಮಿತ್ರ ಚಟರ್ಜಿ, ಗುಂಪು ಹಿಂಸಾಚಾರ ವಿರುದ್ಧ ನಾನು ಧ್ವನಿಯೆತ್ತಿದೆ. ಪ್ರಧಾನಿಗೆ ಬರೆದ ಪತ್ರ ಖಂಡಿತಾ ರಾಜಕೀಯ ಪ್ರೇರಿತವಲ್ಲ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಪರ್ಣ ಸೇನ್, ವಿಚಾರ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಏನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ