ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ನಿಯೋಗ ಇಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರನ್ನು ನವದೆಹಲಿಯಲ್ಲಿರುವ ಬಾಂಗ್ಲಾದೇಶದ ಹೈಕಮೀಷನ್ ಕಚೇರಿಯಲ್ಲಿ ಭೇಟಿ ಮಾಡಿತು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ , ರಾಜ್ಯಸಭಾ ಸದಸ್ಯ ಆನಂದ್ ಶರ್ಮಾ ನೇತೃತ್ವದ ನಿಯೋಗ ಶೇಖ್ ಹಸೀನಾ ಅವರನ್ನು ಭೇಟಿ ಮಾಡಿದೆ ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡಾ ಹಸೀನಾ ಅವರನ್ನು ಭೇಟಿಯಾದರು. ಆದರೆ, ಅವರು ನಿಯೋಗದ ಭಾಗವಾಗಿರಲಿಲ್ಲ ಎಂದು ತಿಳಿದುಬಂದಿದೆ.
ಶೇಖ್ ಹಸೀನಾ ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಕ್ಷಣಾ ಮತ್ತು ಭದ್ರತೆ, ವ್ಯಾಪಾರ ಮತ್ತು ಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಬಂಧವನ್ನು ಬಲಪಡಿಸಲು ಮೂರು ಯೋಜನೆಗಳನ್ನು ಜಂಟಿಯಾಗಿ ಉದ್ಘಾಟಿಸಿದ್ದರು.
ಸಾರಿಗೆ, ಸಂಪರ್ಕ, ಸಾಮರ್ಥ್ಯ ವೃದ್ದಿ ಮತ್ತು ಸಂಸ್ಕೃತಿಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಉಭಯ ದೇಶಗಳು ಏಳು ಒಪ್ಪಂದಗಳಿಗೆ ಸಹಿ ಹಾಕಿವೆ. ಬಾಂಗ್ಲಾದೇಶದಿಂದ ಎಲ್ ಪಿಜಿ ಆಮದು ಮಾಡಿಕೊಳ್ಳುವ ಮೂರು ಯೋಜನೆಗಳಿಗೂ ಚಾಲನೆ ನೀಡಲಾಗಿದೆ. 2018ರಲ್ಲಿ ಬಾಂಗ್ಲಾದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶೇಖ್ ಹಸೀನಾ ಅವರ ಮೊದಲ ಭಾರತ ಭೇಟಿ ಇದಾಗಿದೆ.
Advertisement