ಅತ್ಯಾಚಾರದ ಆರೋಪ ಹೊರಿಸಿದ್ದ ಮಹಿಳೆಯನ್ನೇ ಮದುವೆಯಾದ ಮ್ಯಾಜಿಸ್ಟ್ರೇಟ್
ಕುಶೀನಗರ್: ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದ ಮಹಿಳೆಯೊಬ್ಬರನ್ನೇ ಉತ್ತರಪ್ರದೇಶದ ಉಪವಿಭಾಗೀಯ ಮ್ಯಾಜಿಸ್ಟ್ರೇಟರೊಬ್ಬರು ಮದುವೆಯಾಗಿ ಸುದ್ದಿಗೆ ಗುದ್ದು ಕೊಟ್ಟಿದ್ದಾರೆ.
ನಾಲ್ಕು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡಿ, ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ, ಅವರ ವಿರುದ್ಧ ದೂರು ನೀಡಿ ಆರೋಪ ಮಾಡಿದ್ದರು. ಆದರೆ ನಿನ್ನೆ ನಾಟಕೀಯ ಬೆಳವಣಿಗೆಯಲ್ಲಿ ಅದೇ ವ್ಯಕ್ತಿಯ ಜೊತೆಗೆ ಎಲ್ಲರ ಸಮ್ಮುಖದಲ್ಲಿ ಮದುವೆ ಸಮಾರಂಭ ಜರುಗಿದೆ.
ಎರಡು ಬಾರಿ ತಾನು ಗರ್ಭಪಾತ ಮಾಡಿಸಿಕೊಂಡಿದ್ದಾಗಿ ದೂರಿನಲ್ಲಿ ಮಹಿಳೆ ಹೇಳಿದ್ದಾರೆ. ಆರೋಪ ಎದುರಿಸುತ್ತಿದ್ದ ಮ್ಯಾಜಿಸ್ಟ್ರೇಟ್ ದಿನೇಶ್ ಕುಮಾರ್ ಅವರನ್ನು ಹಾಪುರ್ ಗೆ ವರ್ಗಾವಣೆ ಮಾಡಲಾಗಿತ್ತು, ಈ ಹಿನ್ನೆಲೆಯಲ್ಲಿ ಕೆಲವು ದಾಖಲೆಗಳನ್ನು ಕೊಂಡೊಯ್ಯುವುದಕ್ಕೆ ಮ್ಯಾಜಿಸ್ಟ್ರೇಟ್ ಕುಶೀನಗರ್ ನಲ್ಲಿರುವ ತಮ್ಮ ನಿವಾಸಕ್ಕೆ ಬಂದಿದ್ದಾಗ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನಿಲ್ ಕುಮಾರ್ ಸಿಂಗ್ ತಕ್ಷಣವೇ ತನಿಖೆಗೆ ಆದೇಶಿಸಿದ್ದಾರೆ.
ಆದರೆ ಮಧ್ಯರಾತ್ರಿ ವೇಳೆ ಎಸ್ ಡಿಎಂ ರಮೇಶ್ ಯಾದವ್ ಹಾಗೂ ಮತ್ತೋರ್ವ ಅಧಿಕಾರಿ ಪ್ರಮೋದ್ ತಿವಾರಿ ಸಮ್ಮುಖದಲ್ಲಿ ಇಬ್ಬರೂ ವಿವಾಹವಾಗಿದ್ದಾರೆ. ಆರೋಪಿ ಕುಮಾರ್ ಹಾಗೂ ಮಹಿಳೆ ಇಬ್ಬರೂ ಆಜಂಘರ್ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ