ಕರ್ತಾರ್‌ಪುರ್  ಗುರುದ್ವಾರ ಪ್ರವೇಶಕ್ಕೆ ಶುಲ್ಕ: ಧಾರ್ಮಿಕ ನಂಬಿಕೆಗಳ ಮೇಲೆ ಪಾಕ್ ವ್ಯಾಪಾರ- ಹರ್‌ಸಿಮ್ರತ್ 

ಧಾರ್ಮಿಕ ನಂಬಿಕೆಗಳ ಮೇಲೆ ಪಾಕಿಸ್ತಾನ ವ್ಯಾಪಾರ ನಡೆಸಲು ಮುಂದಾಗಿರುವುದು ನಾಚಿಕೆ ಗೇಡು ಎಂದು ಶಿರೋಮಣಿ ಅಕಾಲಿದಳದ ಹಿರಿಯ ನಾಯಕಿ ಹಾಗೂ ಕೇಂದ್ರ ಆಹಾರ ಸಂಸ್ಕರಣೆ ಖಾತೆ ಸಚಿವೆ ಹರ್‌ಸಿಮ್ರತ್  ಕೌರ್ ಬಾದಲ್  ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹರ್‌ಸಿಮ್ರತ್  ಕೌರ್
ಹರ್‌ಸಿಮ್ರತ್  ಕೌರ್

ನವದೆಹಲಿ:  ಕರ್ತಾರ್‌ಪುರ ಸಾಹಿಬ್ ಗುರುದ್ವಾರ ಪ್ರವೇಶಿಸುವ ಪ್ರತಿಯೊಬ್ಬ ಸಿಖ್ ಯಾತ್ರಾರ್ಥಿಯಿಂದ  20 ಡಾಲರ್ ಶುಲ್ಕ ವಿಧಿಸಲು  ಪಾಕಿಸ್ತಾನ ನಿರ್ಧರಿಸಿರುವುದು ಅತಿರೇಕವಾಗಿದೆ. ಧಾರ್ಮಿಕ ನಂಬಿಕೆಗಳ ಮೇಲೆ ಪಾಕಿಸ್ತಾನ ವ್ಯಾಪಾರ ನಡೆಸಲು ಮುಂದಾಗಿರುವುದು ನಾಚಿಕೆ ಗೇಡು ಎಂದು ಶಿರೋಮಣಿ ಅಕಾಲಿದಳದ ಹಿರಿಯ ನಾಯಕಿ ಹಾಗೂ ಕೇಂದ್ರ ಆಹಾರ ಸಂಸ್ಕರಣೆ ಖಾತೆ ಸಚಿವೆ ಹರ್‌ಸಿಮ್ರತ್  ಕೌರ್ ಬಾದಲ್  ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್  ಅವರ 550 ಜಯಂತಿ ಅಂಗವಾಗಿ ಬರುವ ನವೆಂಬರ್ 9 ರಂದು ಕರ್ತಾರ್ ಪುರ್  ಕಾರಿಡಾರ್ ಅನ್ನು ಉದ್ಘಾಟಿಸಲಾಗುವುದು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರಕಟಿಸಿದ್ದಾರೆ.

ಭಾರತದ ಸಿಖ್ ಯಾತ್ರಿಕರಿಗೆ ವೀಸಾ ಇಲ್ಲದೆ ಪವಿತ್ರ ಕರ್ತಾರ್‌ಪುರ್ ಸಾಹಿಬ್‌ಗೆ ಪ್ರಯಾಣಿಸಲು ಅವಕಾಶ ಒದಗಿಸಲಿದೆ. ಆದರೆ,  ಗುರುದ್ವಾರ ಪ್ರವೇಶಿಸಲು ಪ್ರತಿಯೊಬ್ಬ ಸಿಖ್ ಯಾತ್ರಿ  ತಲಾ 20 ಡಾಲರ್ ಪಾವತಿಸಬೇಕು ಎಂಬ ಪಾಕಿಸ್ತಾನ  ನಿಯಮ ವಿಧಿಸಿದ್ದು,ಕಾರಿಡಾರ್ ಆರಂಭಗೊಳ್ಳುವುದರಿಂದ ಸ್ಥಳೀಯರಿಗೆ ಉದ್ಯೋಗ ಲಭಿಸಲಿದೆ ಎಂದು ಇಮ್ರಾನ್ ಖಾನ್  ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ  ಹರ್‌ಸಿಮ್ರತ್  ಕೌರ್, ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ತಾರ್‌ಪುರ್ ಸಾಹಿಬ್ ಗೆ ಭೇಟಿ ನೀಡುವ ಭಕ್ತರಿಂದ 20 ಡಾಲರ್ ಸಂಗ್ರಹಿಸುವ ಪಾಕಿಸ್ತಾನದ ಹೇಳಿಕೆ ನೀಚತನದ್ದು, ಬಡ ಯಾತ್ರಾರ್ಥಿಗಳ ಪರಿಸ್ಥಿತಿ  ಏನು? ಅವರು ಹಣ ಹೇಗೆ ಪಾವತಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.  

ನಮ್ಮ ಧರ್ಮ ವಿಶ್ವಾಸಗಳ ಮೇಲೆ ಪಾಕಿಸ್ತಾನ ವ್ಯವಹಾರ ಮಾಡಲು ನೋಡುತ್ತಿದೆ. ಪ್ರವೇಶ ಶುಲ್ಕದ ಸಂಗ್ರಹದಿಂದ ವಿದೇಶಿ ವಿನಿಮಯ ಹೆಚ್ಚಳಗೊಂಡು  ಪಾಕಿಸ್ತಾನದ ಆರ್ಥಿಕತೆ  ಬಲಗೊಳ್ಳಲಿದೆ ಎಂಬ ಇಮ್ರಾನ್ ಖಾನ್ ಹೇಳಿಕೆ ನಾಚಿಕೆಗೇಡಿನ ವಿಷಯ ಎಂದು  ಹೇಳಿದ್ದಾರೆ.

ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ಸಾಹಿಬ್  ತಮ್ಮ ಜೀವನದ ಕೊನೆಯ 18 ವರ್ಷಗಳನ್ನು ಕರ್ತಾರ್‌ಪುರದ ಗುರುದ್ವಾರದಲ್ಲಿ ಕಳೆದಿದ್ದರು. ಅವರು 1539ರಲ್ಲಿ ಅಲ್ಲಿ ನಿಧನಹೊಂದಿದ್ದರು. ಈ ಗುರುದ್ವಾರ  ಈಗ  ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ  ಕರ್ತಾರ್ಪುರ್ (ಭಾರತ-ಪಾಕಿಸ್ತಾನ ಗಡಿಯಿಂದ ಕೇವಲ ಮೂರು ಕಿಲೋಮೀಟರ್)  ಗ್ರಾಮದಲ್ಲಿದೆ. 

ಗುರುನಾನಕ್ 550 ಜಯಂತಿ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಗಡಿಯಿಂದ ಡೇರಾ ಬಾಬಾ ನಾನಕ್‌ವರೆಗೆ ಕಾರಿಡಾರ್ ನಿರ್ಮಿಸಲು ಭಾರತ ಸಂಕಲ್ಪಿಸಿದೆ. ಪಾಕಿಸ್ತಾನ, ತನ್ನ ಭಾಗದ ಕಾರಿಡಾರ್‌ಅನ್ನು ದರ್ಬಾರ್ ಸಾಹಿಬ್‌ವರೆಗೆ ನಿರ್ಮಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com