ಮತ ಎಣಿಕೆ ಕಾರ್ಯ:ಮಹಾರಾಷ್ಟ್ರ, ಹರ್ಯಾಣದಲ್ಲಿ ಮತ್ತೆ ಅಧಿಕಾರದತ್ತ ಬಿಜೆಪಿ ಚಿತ್ತ

ಮುಂದಿನ 5 ವರ್ಷಗಳ ಕಾಲ ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳನ್ನು ಯಾರು ಆಳಲಿದ್ದಾರೆ ಎಂಬ ಕುತೂಹಲಕ್ಕೆ ಗುರುವಾರ ತೆರೆ ಬೀಳಲಿದೆ.ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮುಂದಿನ 5 ವರ್ಷಗಳ ಕಾಲ ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳನ್ನು ಯಾರು ಆಳಲಿದ್ದಾರೆ ಎಂಬ ಕುತೂಹಲಕ್ಕೆ ಗುರುವಾರ ತೆರೆ ಬೀಳಲಿದೆ.ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ.


ಎರಡೂ ರಾಜ್ಯಗಳಲ್ಲಿ ಈಗ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಅಧಿಕಾರ ನಡೆಸಿದ್ದು ಈ ಬಾರಿ ಕೂಡ ಒಟ್ಟಿಗೆ ಚುನಾವಣೆ ಎದುರಿಸಿದೆ. ಎರಡನೇ ಬಾರಿ ಅಧಿಕಾರದ ಗದ್ದುಗೆ ಏರಲು ಉತ್ಸುಕವಾಗಿದೆ.


ಬಿಜೆಪಿಗೆ ಕಾಂಗ್ರೆಸ್ ಮತ್ತು ಅದರ ಮೈತ್ರಿಪಕ್ಷ ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ ಸಿಪಿ) ಪೈಪೋಟಿ ನೀಡಿದೆ. ಯಾವ ಮೈತ್ರಿಕೂಟಗಳು ಎಷ್ಟು ಸ್ಥಾನ ಗಳಿಸುತ್ತವೆ ಎಂಬ ಕುತೂಹಲ ದೇಶಾದ್ಯಂತ ಮನೆಮಾಡಿದೆ. ಮತದಾನೋತ್ತರ ಸಮೀಕ್ಷೆಯಲ್ಲಿ ಎರಡೂ ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಸೂಚನೆ ಸಿಕ್ಕಿದೆ. 


ಎರಡೂ ರಾಜ್ಯಗಳಲ್ಲಿ ಬಿಜೆಪಿ ಗೆದ್ದರೆ ಲೋಕಸಭೆ ಚುನಾವಣೆ ನಂತರ ಮತ್ತೆ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ನೀತಿಗಳು ಜನರಿಗೆ ಇಷ್ಟವಾಗಿದೆ ಎಂದು ವಿಶ್ಲೇಷಿಸಬಹುದು. ಅದು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದಾಗಿರಬಹುದು, ರಾಷ್ಟ್ರೀಯ ನಾಗರಿಕ ದಾಖಲಾತಿಯಾಗಿರಬಹುದು ಅಥವಾ ಕೇಂದ್ರ ಸರ್ಕಾರದ ಇತರ ನೀತಿ, ಕಾರ್ಯಕ್ರಮಗಳಾಗಿರಬಹುದು. 


ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಬಿಜೆಪಿ 150 ಮತ್ತು ಶಿವಸೇನೆ 124 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಉಳಿದ ಕ್ಷೇತ್ರಗಳಲ್ಲಿ ಸಣ್ಣ ಮೈತ್ರಿಪಕ್ಷಗಳು ಸ್ಪರ್ಧಿಸಿವೆ. ಈ ರಾಜ್ಯದಲ್ಲಿ 145 ಕ್ಷೇತ್ರಗಳ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ-ಶಿವಸೇನೆ ಸದ್ಯ ವಿಧಾನಸಭೆಯಲ್ಲಿ 217 ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿಕೂಟ 56 ಸ್ಥಾನಗಳನ್ನು ಹೊಂದಿವೆ.


11 ಮತದಾನೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ 211 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ. ಕಾಂಗ್ರೆಸ್ ಮತ್ತು ಎನ್ ಸಿಪಿ 64 ಸ್ಥಾನಗಳಲ್ಲಿ ಗೆಲ್ಲಬಹುದು ಎಂಬ ಅಂದಾಜು ಲೆಕ್ಕ ಸಿಕ್ಕಿದೆ.


ಇನ್ನು ಹರ್ಯಾಣ ವಿಧಾನಸಭಾ ಕ್ಷೇತ್ರದ ಫಲಿತಾಂಶ ವಿಚಾರಕ್ಕೆ ಬಂದರೆ ಬಿಜೆಪಿ 90 ಸ್ಥಾನಗಳಲ್ಲಿ 66 ಸ್ಥಾನಗಳನ್ನು ಗೆಲ್ಲಬಹುದು ಎಂದು 7 ಮತದಾನೋತ್ತರ ಸಮೀಕ್ಷೆಗಳು ಹೇಳಿವೆ. ಕಾಂಗ್ರೆಸ್ ಗೆ ಕೇವಲ 14 ಸ್ಥಾನಗಳು ಸಿಗಬಹುದು ಎಂದು ಹೇಳಲಾಗುತ್ತಿದೆ. ಹರ್ಯಾಣದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ವರ್ಚಸ್ಸು ಮತ್ತಷ್ಟು ಹೆಚ್ಚಲಿದೆ.

ಈ ಮಧ್ಯೆ ದೇಶದ 17 ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳ ಫಲಿತಾಂಶ ಕೂಡ ಇಂದೇ ಹೊರಬೀಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com