ಮುಂಬೈ: ಗುರುವಾರ ಹೊರಬಿದ್ದ ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶ ಹಲವು ಅಚ್ಚರಿಗೆ ಕಾರಣವಾಗಿದೆ. ಶರದ್ ಪವಾರ್ ನೇತೃತ್ವದ ಎನ್ ಸಿಪಿ 62 ಸ್ಥಾನಗಳನ್ನು ಗೆದ್ದುಕೊಂಡಿದೆ.
220 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದ್ದ ಬಿಜೆಪಿ ಶಿವಸೇನೆ ಮೈತ್ರಿ 162 ಸ್ಥಾನಗಳನ್ನಷ್ಟೇ ಪಡೆಯಲು ಶಕ್ತವಾಗಿದೆ. ಅಚ್ಚರಿ ಎಂಬಂತೆ ಶರದ್ ಪವಾರ್ ಮತ್ತೆ ಪುಟಿದೆದ್ದಿದ್ದಾರೆ, ಇದರ ಪರಿಣಾಮ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಹೆಚ್ಚಾಗಿವೆ.
ಫಲಿತಾಂಶದ ನಂತರ ಮಾತನಾಡಿದ ಶರದ್ ಪವಾರ್, ನನ್ನ ರಾಜಕೀಯ ಜೀವನ ಮುಗಿಯಿತು ಎಂದು ಕೊಂಡವರಿಗೆ ಈ ಚುನಾವಣಾ ಫಲಿತಾಂಶ ಸರಿಯಾದ ಪಾಠ ಕಲಿಸಿದೆ ಜೊತೆಗೆ ಉತ್ತರ ನೀಡಿದೆ ಎಂದೂ ಹೇಳಿದ್ದಾರೆ.
ಕೆಲವರು ಮಿತಿ ಮೀರಿ ನಡೆದುಕೊಂಡರು. ಅಧಿಕಾರ ದುರ್ಬಳಕೆ ಮಾಡಿಕೊಂಡರು. ಅಲ್ಲದೆ ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಿದವರಿಗೆ ರಾಜ್ಯದ ಜನರೇ ಸರಿಯಾದ ಉತ್ತರ ನೀಡಿದ್ದಾರೆ. ಈ ಚುನಾವಣೆಯೊಂದಿಗೆ ನನ್ನ ರಾಜಕೀಯ ಜೀವನ ಅಂತ್ಯವಾಯಿತು ಎಂದವರಿಗೆ ಜನರೇ ಬುದ್ದಿ ಕಲಿಸಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಜನರು ಬಿಜೆಪಿ- ಶಿವಸೇನೆಯ 220 ಸೀಟ್ ಗೆಲ್ಲುವ ಕನಸಿಗೆ ತಣ್ಣೀರು ಎರಚಿದ್ದಾರೆ. ಅಧಿಕಾರದ ದುರಹಂಕಾರ ಜನರಿಗೆ ಇಷ್ಟವಾಗಿಲ್ಲ ಎಂದು ಕೇಸರಿ ಮೈತ್ರಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈಗಾಗಲೇ ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ- ಶಿವಸೇನೆ ಮೈತ್ರಿ 162 ಸ್ಥಾನ ಗೆದ್ದು ಬಹುಮತ ಪಡೆದಿದ್ದರೆ, ಕಾಂಗ್ರೆಸ್ -ಎನ್ ಸಿಪಿ ಮೈತ್ರಿ 104 ಸ್ಥಾನ ಗೆದ್ದುಕೊಂಡಿದೆ.
Advertisement