ಪಾಕ್ ಜೈಲಿನಿಂದ ಮಸೂದ್ ಅಜರ್ ಸದ್ದಿಲ್ಲದೆ ಬಿಡುಗಡೆ: ಗುಪ್ತಚರ ಮಾಹಿತಿ
ನವದೆಹಲಿ: ಭಾರತ ವಿರುದ್ಧ ಪಾಕಿಸ್ತಾನ ಭಾರಿ ಸಂಚು ರೂಪಿಸುತ್ತಿದ್ದು, ಇದಕ್ಕಾಗಿ ಜಾಗತಿಕ ಉಗ್ರ ಹಣೆಪಟ್ಟಿಯ ಜೆಇಎಂ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ರಹಸ್ಯವಾಗಿ ಬಿಡುಗಡೆ ಮಾಡಿದೆ ಎಂದು ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ.
ರಾಜಸ್ತಾನ ಮತ್ತು ಜಮ್ಮು ಬಳಿಯ ಪಾಕಿಸ್ತಾನ ಗಡಿಯಲ್ಲಿ ಈಗಾಗಲೇ ಹೆಚ್ಚುವರಿ ಸೈನಿಕರನ್ನು ಪಾಕಿಸ್ತಾನ ನಿಯೋಜಿಸುತ್ತಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಣ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುವುದಕ್ಕಾಗಿಯೇ ಪಾಕಿಸ್ತಾನ ರಹಸ್ಯವಾಗಿ ಮಸೂದ್ ಅಜಾರ್ ನನ್ನು ಬಿಡುಗಡೆ ಮಾಡಿದೆ. ಬೇರೆ ಭಯೋತ್ಪಾದನಾ ಸಂಘಟನೆಗಳು ಕೂಡಾ ಬಹಿರಂಗವಾಗಿಯೇ ಕೆಲಸ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು- ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರವರಿ 14 ರಂದು ಬಾಂಬ್ ದಾಳಿಯ ಸಂಚುಕೋರ ಎಂದು ವಿವಿಧ ವರದಿಗಳು ಬಂದ ನಂತರ ಪಾಕಿಸ್ತಾನ ಅಜರ್ ನನ್ನು ರಕ್ಷಣಾ ಬಂಧನದಲ್ಲಿರಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ