ಭೋಪಾಲ್: ಮಧ್ಯ ಪ್ರದೇಶದ ಜಬಲ್ಪುರ್ ಪೊಲೀಸರು ಮೂವರು ಶಾಲಾ ಮಕ್ಕಳನ್ನು ಐದು ನಿಮಿಷಗಳ ಕಾಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ಮಾಡಿದ್ದರು ಮತ್ತು ಆ ಮಕ್ಕಳು ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲಿ ಫೋಟೋ ತೆಗೆಸಿಕೊಂಡು ಖುಷಿ ಪಡುತ್ತಾರೆ ಎಂದು ಭಾವಿಸಿದ್ದರು. ಆದರೆ ಮಕ್ಕಳ್ಳು ನಗರದಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟ ದಂಧೆಯನ್ನು ಬಯಲು ಮಾಡಲು ಪೊಲೀಸರಿಗೆ ಸಹಾಯ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಜಬಲ್ಪುರದ 10 ವಿವಿಧ ಸರ್ಕಾರಿ ಶಾಲೆಗಳ ಸುಮಾರು 40 ಮಕ್ಕಳನ್ನು ಜಬಲ್ಪುರ್ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಸಿಂಗ್ ಅವರು ವಿಶೇಷ ಅತಿಥಿಗಳಾಗಿ ಆಹ್ವಾನಿಸಿದ್ದರು.
ಪೊಲೀಸ್ ಅಧಿಕಾರಿಗಳ ಸಮವಸ್ತ್ರ ಧರಿಸಿದ್ದ 6 ಮತ್ತು 7ನೇ ತರಗತಿಯ ಮಕ್ಕಳಿಗೆ, ನಿಮ್ಮಲ್ಲಿ ಯಾರು ಪೊಲೀಸ್ ಅಧಿಕಾರಿಯಾಗಲು ಬಯಸುತ್ತೀರಿ ಎಂದು ಎಸ್ ಪಿ ಸಿಂಗ್ ಪ್ರಶ್ನಿಸಿದ್ದರು. ಈ ವೇಳೆ 40 ಮಕ್ಕಳ ಪೈಕಿ ಮೂರು ಮಕ್ಕಳು ಯಾವುದೇ ಹಿಂಜರಿಕೆ ಇಲ್ಲದೆ ಮುಂದೆ ಬಂದು ತಾವು ಪೊಲೀಸ್ ಅಧಿಕಾರಿಯಾಗುವುದಾಗಿ ಧೈರ್ಯವಾಗಿ ಹೇಳಿದ್ದರು. ಈ ಮೂವರು ಮಕ್ಕಳಿಗೆ ತಲಾ ಐದು ನಿಮಿಷಗಳ ಕಾಲ ಜಬಲ್ಪುರ್ ಎಸ್ ಪಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿತ್ತು. ಈ ಮೂವರು ಮಕ್ಕಳು ಪೊಲೀಸ್ ವರಿಷ್ಠಾಧಿಕಾರಿಯ ಕುರ್ಚಿಯಲ್ಲಿ ಕುಳಿತು, ವಿವಿಧ ಪೊಲೀಸ್ ಠಾಣೆಗಳಿಗೆ ಕರೆ ಮಾಡಿದರು.
ಈ ಮೂವರು ಹುಡುಗರ ಎಸ್ ಪಿ ಪಾತ್ರ ಅಂತಿಮವಾಗಿ ಜಬಲ್ಪುರ ಪೊಲೀಸರಿಗೆ ಅನಿರೀಕ್ಷಿತ ಲಾಭ ನೀಡಿತು. ಐದು ನಿಮಿಷಗಳ ಕಾಲ ಎಸ್ ಪಿಯಾಗಿ ಕಾರ್ಯನಿರ್ವಹಿಸಿದ ಅವರು, ಜಬಲ್ಪುರ ಕೊಟ್ವಾಲಿ ಮತ್ತು ಮಾರ್ಹೋಟಲ್‌ನ ಕೊಳೆಗೇರಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ಅಕ್ರಮ ಮದ್ಯ ತಯಾರಿಕೆ, ಮಾರಾಟ ದಂಧೆಗಳನ್ನು ಭೇದಿಸಲು ದೂರವಾಣಿ ಮತ್ತು ವೈರ್‌ಲೆಸ್ ಸೆಟ್‌ಗಳ ಮೂಲಕ ಆಯಾ ಪೊಲೀಸ್ ಠಾಣೆಯ ಉಸ್ತುವಾರಿಗಳಿಗೆ ಮಾಹಿತಿ ನೀಡಿದರು.
ಸ್ಲಂ ನಿವಾಸಿಗಳಾಗಿರುವ ಈ ಮೂವರು ಮಕ್ಕಳು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಅಕ್ರಮ ಮದ್ಯ ಮಾರಾಟ ದಂಧೆಯಲ್ಲಿ ತೊಡಗಿದ್ದವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement