ಮೋದಿ 'ಭಾರತದ ಪಿತಾಮಹ' ಹೇಳಿಕೆಗೆ ಮಹಾತ್ಮಾ ಗಾಂಧಿ ಮರಿಮೊಮ್ಮಗ ತೀವ್ರ ಆಕ್ಷೇಪ 

ಪ್ರಧಾನಿ ನರೇಂದ್ರ ಮೋದಿ ಭಾರತ ದೇಶದ ಪಿತಾಮಹ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಮಹಾತ್ಮಾ ಗಾಂಧೀಜಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಟ್ರಂಪ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. 
ಮೋದಿ 'ಭಾರತದ ಪಿತಾಮಹ' ಹೇಳಿಕೆಗೆ ಮಹಾತ್ಮಾ ಗಾಂಧಿ ಮರಿಮೊಮ್ಮಗ ತೀವ್ರ ಆಕ್ಷೇಪ 
Updated on

ಮುಂಬೈ; ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತ ದೇಶದ ಪಿತಾಮಹರೆನಿಸಬಹುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಮಹಾತ್ಮಾ ಗಾಂಧೀಜಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಟ್ರಂಪ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.


ಭಾರತದ ಪಿತಾಮಹ ನರೇಂದ್ರ ಮೋದಿ ಎಂದು ಹೇಳುವ ಟ್ರಂಪ್ ಅಮೆರಿಕಾ ಅಧ್ಯಕ್ಷ ಟ್ರಂಪ್ ಅಮೆರಿಕಾ ಪಿತಾಮಹರಲ್ಲೊಬ್ಬರಾದ ಜಾರ್ಜ್ ವಾಷಿಂಗ್ಟನ್ ಅವರ ಸ್ಥಾನದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಸಿದ್ದರಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಈ ವರ್ಷ ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸುತ್ತಿರುವುದು ಕೇವಲ ಸಾಂಕೇತಿಕವಷ್ಟೆ, ನಿಜವಾಗಿಯೂ ಮಹಾತ್ಮಾ ಗಾಂಧಿಯವರ ತತ್ವ, ಆದರ್ಶಗಳು, ಅವರು ಹಾಕಿಕೊಟ್ಟ ಮಾರ್ಗದರ್ಶನಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದಿದ್ದಾರೆ.


ಕಳೆದ ವಾರ ಅಮೆರಿಕಾ ಪ್ರವಾಸದಲ್ಲಿದ್ದ ವೇಳೆ ಪ್ರಧಾನಿ ಮೋದಿಯನ್ನು ಹೊಗಳುತ್ತಾ ಟ್ರಂಪ್ ಅವರು, ಹಿಂದೆ ಭಾರತ ದೇಶ ಛಿದ್ರವಾಗಿ ಹೋಗಿತ್ತು. ಭಿನ್ನಮತೀಯತೆ, ಕಲಹಗಳು ನಡೆಯುತ್ತಿದ್ದವು, ಮೋದಿಯವರು ಅಧಿಕಾರಕ್ಕೆ ಬಂದ ನಂತರ ಎಲ್ಲರನ್ನೂ ಒಟ್ಟು ಸೇರಿಸಿ ಸರಿ ಮಾಡಿದ್ದಾರೆ. ಒಂದು ಕುಟುಂಬದಲ್ಲಿ ತಂದೆ ಮಾಡುವಂತಹ ಕೆಲಸ ಮಾಡಿದ್ದಾರೆ. ಬಹುಶಃ ಅವರು ಭಾರತದ ಪಿತಾಮಹ ಎನಿಸಿಕೊಳ್ಳಬಹುದು ಎಂದಿದ್ದರು.


ಟ್ರಂಪ್ ಅವರ ಹೇಳಿಕೆಗೆ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ತುಷಾರ್ ಗಾಂಧಿ, ದೇಶದ ಪಿತಾಮಹ ಗಾಂಧೀಜಿಯವರ ಸ್ಥಾನಕ್ಕೆ ಬೇರೆಯವರನ್ನು ತಂದು ನಿಲ್ಲಿಸುವ ಅಗತ್ಯವಿದೆ ಎಂದು ಯಾರಾದರೂ ಬಯಸಿದ್ದರೆ ಅದಕ್ಕೆ ಸ್ವಾಗತ. ಹೀಗೆ ಹೇಳುತ್ತಿರುವ ಟ್ರಂಪ್ ಅವರು ಜಾರ್ಜ್ ವಾಷಿಂಗ್ಟನ್ ಸ್ಥಾನದಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಾರೆಯೇ ಎಂದು ಕೇಳಿದರು.


59 ವರ್ಷದ ತುಷಾರ್ ಗಾಂಧಿ ಪತ್ರಕರ್ತ ಅರುಣ್ ಗಾಂಧಿಯವರ ಮಗನಾಗಿದ್ದು ಮನಿಲಾಲ್ ಗಾಂಧಿಯವರ ಮೊಮ್ಮಗ ಮತ್ತು ಮಹಾತ್ಮಾ ಗಾಧಿಯವರ ಮರಿ ಮೊಮ್ಮಗನಾಗಿದ್ದಾರೆ. ಕೆಲ ಬಲ ಪಂಥೀಯರು ನಾಥುರಾಮ್ ಗೋಡ್ಸೆ ಮಹಾತ್ಮಾ ಗಾಂಧಿಯವರನ್ನು ಕೊಂದ ವಿಚಾರವನ್ನು ವೈಭವೀಕರಿಸುತ್ತಿರುವ ಬಗ್ಗೆ ಕೇಳಿದಾಗ ತುಷಾರ್ ಗಾಂಧಿ, ಎಲ್ಲವನ್ನೂ ಕಾಲ ನಿರ್ಧರಿಸುತ್ತದೆ. ಹಿಂಸಾಚಾರ ಮತ್ತು ದ್ವೇಷವನ್ನು ಬೆಂಬಲಿಸುವವರು ಗೋಡ್ಸೆಯನ್ನು ಹೊಗಳಬಹುದು. ಅವರ ಮೇಲೆ ಯಾವುದೇ ರೀತಿಯ ದ್ವೇಷ ನನಗಿಲ್ಲ. ಬಾಪು ಅವರನ್ನು ಆರಾಧಿಸುವ ಹಕ್ಕು ನನಗಿರುವಂತೆ ಅವರಿಗೆ ಗೋಡ್ಸೆಯನ್ನು ಬೆಂಬಲಿಸುವ ಹಕ್ಕು ಕೂಡ ಇರುತ್ತದೆ ಎಂದರು.


ಬಾಪು ಅವರ 150ನೇ ಜಯಂತಿ ಕೇವಲ ಸಾಂಕೇತಿಕವಷ್ಟೆ, ಅವರ ತತ್ವ, ಆಲೋಚನೆ-ಸಿದ್ದಾಂತಗಳನ್ನು ಪ್ರತಿ ಕಡೆಗಳಲ್ಲಿ ಪಾಲಿಸಬಹುದು, ಅದು ಜೀವನದಲ್ಲಿಯಾಗಲಿ ಅಥವಾ ಸರ್ಕಾರದ ಆಡಳಿತದಲ್ಲಿಯಾಗಲಿ, ಆದರೆ ಅದು ನಡೆಯುತ್ತಿಲ್ಲ, ಬಾಪೂಜಿಯವರ ಫೋಟೋಗಳು ಕರೆನ್ಸಿ, ಸ್ವಚ್ಛ ಭಾರತ ಅಭಿಯಾನ ಇಂತವುಗಳಿಗೆ ಸೀಮಿತವಾಗಿಬಿಟ್ಟಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com