ಕಾಶ್ಮೀರದಲ್ಲಿ ನಿರ್ಬಂಧಗಳು ಮುಂದುವರಿಕೆ, ಬಂಧನ ಪರಿಶೀಲನೆ: ಮುಖ್ಯ ಕಾರ್ಯದರ್ಶಿ

ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಕಣಿವೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳು ಮುಂದುವರೆಯಲಿವೆ ಎಂದು ಕಾಶ್ಮೀರ ಮುಖ್ಯ ಕಾರ್ಯದರ್ಶಿ...

Published: 16th August 2019 05:23 PM  |   Last Updated: 16th August 2019 05:23 PM   |  A+A-


subramanyam

ಬಿ.ವಿ.ಆರ್​. ಸುಬ್ರಹ್ಮಣ್ಯಂ

Posted By : Lingaraj Badiger
Source : The New Indian Express

ಶ್ರೀನಗರ: ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಕಣಿವೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳು ಮುಂದುವರೆಯಲಿವೆ ಎಂದು ಕಾಶ್ಮೀರ ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್​. ಸುಬ್ರಹ್ಮಣ್ಯಂ ಅವರು ಶುಕ್ರವಾರ ಹೇಳಿದ್ದಾರೆ.

ಈ ವಾರಂತ್ಯಕ್ಕೆ ನಿರ್ಬಂಧಗಳನ್ನು ಸಡಿಸಲಾಗುವುದು. ಯಾವುದೇ ಹಿಂಸಾಚಾರ ಮತ್ತು ಜೀವ ಹಾನಿಯನ್ನು ತಡೆಯುವುದಕ್ಕಾಗಿ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದ ಕಡಿತಗೊಳಿಸಲಾಗಿದ್ದ ದೂರವಾಣಿ, ಮೊಬೈಲ್ ​ಫೋನ್​ ಮತ್ತು ಇಂಟರ್​ನೆಟ್​ ಸಂಪರ್ಕಗಳನ್ನು ಮರುಚಾಲನೆಗೊಳಿಸಲಾಗುತ್ತಿದೆ. ವಾರಾಂತ್ಯದಲ್ಲಿ ಶಾಲಾ-ಕಾಲೇಜುಗಳು ಮತ್ತಿತರ ಶೈಕ್ಷಣಿಕ ಸಂಸ್ಥೆಗಳು ಪುನಾರಂಭಗೊಳ್ಳಲಿವೆ ಎಂದು ಸುಬ್ರಹ್ಮಣ್ಯಂ ಅವರು ಹೇಳಿದ್ದಾರೆ. 

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಜತೆಗೆ, ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಈ ನಿರ್ಧಾರವನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಕಾಶ್ಮೀರ ಕಣಿವೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಭಂಗವಾಗುವ ಜತೆಗೆ ಅಶಾಂತಿ ಉಂಟಾಗುವ ಭೀತಿ ಮೂಡಿತ್ತು. ಈ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ವಿಧಿಸುವುದು ಅನಿವಾರ್ಯವಾಗಿತ್ತು ಮತ್ತು ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. ಅಲ್ಲದೆ ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಕಾಶ್ಮೀರ ಕಣಿವೆಯ 22 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಯಾವುದೇ ಹಿಂಸಾಚಾರ ನಡೆದ ಬಗ್ಗೆ ವರದಿಗಳು ಬಂದಿಲ್ಲ. ಇಲ್ಲೆಲ್ಲ ದೈನಂದಿನ ಚಟುವಟಿಕೆಗಳು ಎಂದಿನಂತೆ ಶಾಂತಿಯುತವಾಗಿ ಸಾಗುತ್ತಿದೆ. ಐದು ಜಿಲ್ಲೆಗಳಲ್ಲಿ ರಾತ್ರಿ ವೇಳೆ ಮಾತ್ರ ಕೆಲವು ನಿರ್ಬಂಧಗಳು ಇರಲಿವೆ. ಉಳಿದ ಜಿಲ್ಲೆಗಳಲ್ಲಿ ಯಾವುದೇ ನಿರ್ಬಂಧಗಳಿರುವುದಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಓಮರ್​ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನದಲ್ಲಿರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸುಬ್ರಹ್ಮಣ್ಯಂ, ಕಾಶ್ಮೀರ ಕಣಿವೆಯಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಗಮನದಲ್ಲಿ ಇರಿಸಿಕೊಂಡು ಸೂಕ್ತವಾದ ಸಮಯದಲ್ಲಿ ಅವರನ್ನು ಗೃಹ ಬಂಧನದಿಂದ ಬಿಡುಗಡೆಗೊಳಿಸಲಾಗುವುದು ಎಂದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp