ಚಿದಂಬರಂ ಬೆಂಬಲಕ್ಕೆ ನಿಂತ ಪ್ರಿಯಾಂಕಾ ವಾದ್ರಾ, ರಾಹುಲ್ ಗಾಂಧಿ; ಕೇಂದ್ರದ ವಿರುದ್ಧ ಆಕ್ರೋಶ
ನವದೆಹಲಿ: ಬಂಧನ ಭೀತಿಯಿಂದ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು ತಲೆಮರೆಸಿಕೊಂಡಿದ್ದು ಇದರ ಬೆನ್ನಲ್ಲೇ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಚಿದಂಬರಂ ಬಂಧನ ಭೀತಿಯಿಂದ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ತುರ್ತು ವಿಚಾರಣೆಗೆ ಸುಪ್ರೀಂ ಅಸಾಧ್ಯ ಎಂದು ಹೇಳಿದ್ದು ಸದ್ಯ ಚಿದಂಬರಂ ಅವರು ತಮ್ಮ ಮೊಬೈಲ್ ಫೋನ್ ಅನ್ನು ಸ್ವೀಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದಾರೆ.
ಈ ಮಧ್ಯೆ ಇಂದು ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ನಾವೆಲ್ಲರೂ ಚಿದಂಬರಂ ಅವರ ಬೆಂಬಲಕ್ಕಿದ್ದೇವೆ. ಅದೇನೇ ಪರಿಣಾಮಗಳು ಎದುರಾಗಲಿ ಸತ್ಯಕ್ಕಾಗಿ ಹೋರಾಟ ಮುಂದುವರಿಸುತ್ತೇವೆ ಎಂದಿದ್ದಾರೆ.
ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಸಹ ಟ್ವೀಟ್ ನಲ್ಲಿ ಹಣಕಾಸು ಸಚಿವರಾಗಿ, ಗೃಹ ಸಚಿವರಾಗಿ ಚಿದಂಬರಂ ದೇಶಕ್ಕಾಗಿ ಪ್ರಮಾಣಿಕವಾಗಿ ದುಡಿದಿದ್ದಾರೆ. ಮೋದಿ ಸರ್ಕಾರದ ವೈಫಲ್ಯಗಳನ್ನು, ಆಡಳಿತ ನೀತಿಯನ್ನು ಯಾವುದೇ ಹಿಂಜರಿತವಿಲ್ಲದೆ ಹೇಳುತ್ತಾ ಬಂದಿದ್ದಾರೆ. ಅವರು ಹೇಳುವ ಸತ್ಯಗಳು ಹೇಡಿಗಳಿಗೆ ಕಹಿಯಾಗಿದ್ದವು. ಹೀಗಾಗಿ ಅವರನ್ನು ಅವಮಾನಕರವಾಗಿ ಬಂಧಿಸುವ ಹುನ್ನಾರ ನಡೆಸಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ