ಶ್ರೀನಗರದಿಂದ ರಾಹುಲ್ ಗಾಂಧಿ, ಪ್ರತಿಪಕ್ಷ ನಾಯಕರನ್ನು ವಾಪಸ್ ಕಳುಹಿಸಿದ ಕಾಶ್ಮೀರ ಸರ್ಕಾರ

ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವುದಕ್ಕಾಗಿ ಶನಿವಾರ ಶ್ರೀನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ 11 ಪ್ರತಿಪಕ್ಷ ನಾಯಕರನ್ನು ಕಾಶ್ಮೀರ ಸರ್ಕಾರ ದೆಹಲಿಗೆ ವಾಪಸ್ ಕಳುಹಿಸಿದೆ.
ಶ್ರೀನಗರ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ
ಶ್ರೀನಗರ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವುದಕ್ಕಾಗಿ ಶನಿವಾರ ಶ್ರೀನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ 11 ಪ್ರತಿಪಕ್ಷ ನಾಯಕರನ್ನು ಕಾಶ್ಮೀರ ಸರ್ಕಾರ ದೆಹಲಿಗೆ ವಾಪಸ್ ಕಳುಹಿಸಿದೆ.

ಭದ್ರತೆ ದೃಷ್ಟಿಯಿಂದ ಕಣಿವೆ ರಾಜ್ಯ ಪ್ರವೇಶಿಸಲು ಕಾಂಗ್ರೆಸ್ ನಾಯಕರಿಗೆ ಅವಕಾಶ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಣಿವೆ ರಾಜ್ಯದಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.

ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಪರಿಶೀಲಿಸಲು ರಾಹುಲ್ ಗಾಂಧಿ ನೇತೃತ್ವದ ಪ್ರತಿಪಕ್ಷಗಳ ನಿಯೋಗ ಇಂದು ಶ್ರೀನಗರಕ್ಕೆ ಆಗಮಿಸಿತ್ತು. ಆದರೆ ಕಾಂಗ್ರೆಸ್ ನಿಯೋಗವನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿಯೇ ತಡೆದ ಭದ್ರತಾ ಸಿಬ್ಬಂದಿ, ಅವರನ್ನು ವಾಪಸ್ ದೆಹಲಿಗೆ ಕಳುಹಿಸಿದ್ದಾರೆ.

ಪ್ರತಿಪಕ್ಷಗಳ ನಿಯೋಗದಲ್ಲಿ ಗುಲಾಮ್ ನಬಿ ಆಝಾದ್, ಆನಂದ್ ಶರ್ಮಾ, ಕೆ.ಸಿ.ವೇಣುಗೋಪಾಲ್, ಸಿಪಿಐನ ಡಿ.ರಾಜಾ, ಸಿಪಿಐ(ಎಂ)ನ ಸೀತಾರಾಮ್ ಯಚೂರಿ, ಡಿಎಂಕೆಯ ತಿರುಚಿ ಶಿವಾ, ಆರ್‍ಜೆಡಿಯ ಮನೀಜ್ ಝಾ, ಟಿಎಂಸಿಯ ದಿನೇಶ್ ತ್ರಿವೇದಿ, ಎನ್‍ಸಿಪಿಯ ಮಜೀದ್ ಮೆನನ್ ಹಾಗೂ ಜೆಡಿಎಸ್‍ನ ಕುಪೇಂದ್ರ ರೆಡ್ಡಿ ಇದ್ದರು.

ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು, ಯಾವುದೇ ಕಾರಣಕ್ಕೂ ಜಮ್ಮು ಕಾಶ್ಮೀರದ ಕಣಿವೆಯಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಬೇಡಿ. ದಯವಿಟ್ಟು ಇಲ್ಲಿಂದ ವಾಪಸ್ ಹೋಗಿ ಎಂದು ಮನವಿ ಮಾಡಿಕೊಂಡಿದ್ದರು.

ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಇತರ ಬೆದರಿಕೆಗಳಿಂದ ಜನರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ. ಇನ್ನೊಂದೆಡೆ ಜನಸಾಮಾನ್ಯರ ಜೀವನ ಕ್ರಮೇಣ ಪುನಃಸ್ಥಾಪನೆಯಾಗುತ್ತಿದೆ. ಇದಕ್ಕೆ ವಿರೋಧ ಪಕ್ಷಗಳು ಭಂಗ ತರುವ ಪ್ರಯತ್ನಗಳನ್ನು ಹಿರಿಯ ರಾಜಕೀಯ ಮುಖಂಡರು ಮಾಡಬಾರದು. ಒಂದು ವೇಳೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದಲ್ಲಿ ಅದು ನಿರ್ಬಂಧಗಳನ್ನು ಉಲ್ಲಂಘಿಸಿದಂತೆ. ಅಲ್ಲದೆ ಜನರನ್ನು ಅನಾನುಕೂಲತೆಗೆ ತಳ್ಳಿದಂತೆ ಎಂದು ಜಮ್ಮು ಕಾಶ್ಮೀರ ಸರ್ಕಾರ ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com