ತಿಹಾರ್ ಜೈಲಿನಲ್ಲಿಲ್ಲ ಗಲ್ಲಿಗೇರಿಸುವ ವ್ಯಕ್ತಿ: ನಿರ್ಭಯಾ ಹತ್ಯಾಚಾರಿಗಳನ್ನು ನೇಣಿಗೇರಿಸಲು ಸಿದ್ಧ ಎಂದ ತಮಿಳುನಾಡು ಪೊಲೀಸ್
ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ತಿಹಾರ್ ಜೈಲಿನಲ್ಲಿ ಯಾರೂ ಇಲ್ಲ ಎಂಬ ಸುದ್ದಿ ತಿಳಿದ ತಕ್ಷಣ ತಮಿಳುನಾಡಿನ 42 ವರ್ಷದ ಮುಖ್ಯ ಪೊಲೀಸ್ ಪೇದೆಯೊಬ್ಬರು ನಿರ್ಭಯಾ ಹಂತಕರನ್ನು ನೇಣಿಗೇರಿಸಲು ನಾನು ಸಿದ್ಧ ಎಂದು ಸ್ವಯಂ ಪ್ರೇರಿತವಾಗಿ ಮುಂದೆ ಬಂದಿದ್ದಾರೆ.
ಈ ಸಂಬಂಧ ದೆಹಲಿಯ ತಿಹಾರ್ ಜೈಲಿನ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿರುವ ರಾಮನಾಥಪುರಂನ ಎಸ್ ಸುಭಾಷ್ ಶ್ರೀನಿವಾಸನ್ ಅವರು, ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ಸೂಕ್ತ ಸಿಬ್ಬಂದಿ ಇಲ್ಲ ಎಂಬ ಸುದ್ದಿ ತಿಳಿದು ನನಗೆ ಆಘಾತವಾಯಿತು. ಹೀನಾಯ ಕೃತ್ಯ ಎಸಗಿದ ಹಂತಕರನ್ನು ನಾನು ನೇಣಿಗೇರಿಸಲು ಸಿದ್ಧ ಮತ್ತು ಇದಕ್ಕಾಗಿ ನನಗೆ ಯಾವುದೇ ಸಂಬಳ ಕೂಡ ಬೇಡ. ಈ ಕೆಲಸ ಕೊಟ್ಟರೆ ಅದೇ ನನಗೆ ಖುಷಿ ಸಂಗತಿ. ಈ ಕಾರಣದಿಂದ ಈ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ನಿರ್ಭಯಾ ಹಂತಕರಿಗೆ ಗಲ್ಲಿಗೇರಿಸಲು ಅಂತಿಮ ಸಿದ್ಧತೆ ನಡೆದಿದೆ. ಆದರೆ, ದೆಹಲಿ ಜೈಲಿನಲ್ಲಿ ಗಲ್ಲಿಗೇರಿಸುವ ವ್ಯಕ್ತಿ ಇಲ್ಲದ ಕಾರಣ ಉತ್ತರ ಪ್ರದೇಶ ಸರ್ಕಾರಕ್ಕೆ ಈ ಕುರಿತು ಮನವಿ ಮಾಡಲಾಗಿದ್ದು, ಯಾವುದಾದರೂ ವ್ಯಕ್ತಿಯನ್ನು ಕಳುಹಿಸುವಂತೆ ಮನವಿ ಮಾಡಲಾಗಿತ್ತು. ಅಲ್ಲದೆ ಉತ್ತರ ಪ್ರದೇಶದ ಬಸ್ತ್ ಜೈಲಿನಲ್ಲಿ ನೇಣಿನ ಕುಣಿಕೆಯನ್ನು ತಯಾರು ಮಾಡುವಂತೆ ಆದೇಶ ಕೂಡ ಮಾಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ