ನಾಚಿಕೆ ಸ್ವಭಾವದ ಫೋಟೋಗ್ರಾಫರ್ ಈಗ ಮಹಾ ಸಿಎಂ: ಉದ್ಧವ್ ಠಾಕ್ರೆ ಹಿಂದಿದೆ ರೋಚಕ ಕಥೆ!

ನಾಚಿಕೆ ಸ್ವಭಾವದ ವನ್ಯಜೀವಿ ಫೋಟೋಗ್ರಾಫರ್ ಆಗಿದ್ದ, ಮಹಾರಾಷ್ಟ್ರದ ನಿಯೋಜಿತ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಒಬ್ಬ ಪ್ರಭಾವಿ ರಾಜಕಾರಣಿಯಾಗಿ ಬೆಳೆದು ಇಡೀ ಮಹಾರಾಷ್ಟ್ರ ರಾಜಕೀಯವನ್ನೇ ನಿಯಂತ್ರಿಸುವ...
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ನಾಚಿಕೆ ಸ್ವಭಾವದ ವನ್ಯಜೀವಿ ಫೋಟೋಗ್ರಾಫರ್ ಆಗಿದ್ದ, ಮಹಾರಾಷ್ಟ್ರದ ನಿಯೋಜಿತ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಒಬ್ಬ ಪ್ರಭಾವಿ ರಾಜಕಾರಣಿಯಾಗಿ ಬೆಳೆದು ಇಡೀ ಮಹಾರಾಷ್ಟ್ರ ರಾಜಕೀಯವನ್ನೇ ನಿಯಂತ್ರಿಸುವ ಮಟ್ಟಕ್ಕೆ ಏರುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ಸುಮಾರು 15 ವರ್ಷಗಳ ಹಿಂದಿನವರೆಗೆ ಅಂದರೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರನ್ನು ಶಿವಸೇನಾದಿಂದ ಉಚ್ಛಾಟಿಸುವವರೆಗೆ ಯಾರೂ ಉದ್ಧವ್ ಠಾಕ್ರೆ ಅವರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಮತ್ತು ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಪರಂಪರೆ ಮುಂದುವರೆಸುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಏಕೆಂದರೆ ಅವರು ಒಬ್ಬ ಸಂಕೋಚದ, ಮಿದು ಭಾಷೆಯ ಮತ್ತು ಅಂತರ್ಮುಖಿಯಾದ ವ್ಯಕ್ತಿ. ಹೀಗಾಗಿ ಯಾರೂ ಅವರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಅತಿ ಕಡಿಮೆ ಅವಧಿಯಲ್ಲಿ ಪಕ್ಷ ಸಂಘಟನೆಯಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ್ದಲ್ಲದೆ ತಮ್ಮದೇ ಕಾರ್ಯವೈಖರಿ ಮೂಲಕ ಪ್ರಭಾವಿ ರಾಜಕಾರಣಿಯಾಗಿ ಬೆಳೆದರು.

ಮಹಾರಾಷ್ಟ್ರದಲ್ಲಿ ‘ಮರಾಠ ಅಸ್ಮಿತೆ’ಯನ್ನು ಬಡಿದೆಬ್ಬಿಸಿ ಶಿವಸೈನಿಕರೆಂಬ ಕಾರ್ಯಕರ್ತರ ಪಡೆಯನ್ನು ತಯಾರಿಸಿ ತನ್ನ ವಿಭಿನ್ನ ರಾಜಕೀಯ ನಡೆ ಹಾಗೂ ಹೋರಾಟದ ಮೂಲಕ ದೇಶದಾದ್ಯಂತ ಸದ್ದು ಮಾಡಿದವರು ಬಾಳಾ ಠಾಕ್ರೆ. ಮಹಾರಾಷ್ಟ್ರದಲ್ಲಿ ಕಿಂಗ್ ಮೇಕರ್ ಎಂದೇ ಪ್ರಸಿದ್ದಿ ಪಡೆದಿದ್ದ ಠಾಕ್ರೆ ಕುಟುಂಬ ಕುಡಿ ಇದೇ ಮೊದಲ ಬಾರಿಗೆ ಕಿಂಗ್(ಸಿಎಂ) ಆಗುವ ಮೂಲಕ  ಮೂಲಕ ಇತಿಹಾಸ ಸೃಷ್ಟಿಸುತ್ತಿದ್ದಾರೆ.

1966 ರಲ್ಲಿ ಬಾಳಾಸಾಹೇಬ್ ಠಾಕ್ರೆ ಶಿವಸೇನೆ ಪಕ್ಷವನ್ನು ಸ್ಥಾಪಿಸಿದರು. ಸ್ಥಳೀಯ ಸಂಸ್ಥೆಗಳಿಂದ ಹಿಡಿದು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರೂ ಠಾಕ್ರೆ ಕುಟುಂಬದ ಯಾರು ಚುನಾವಣೆಗೆ ಸ್ಪರ್ಧೆ ನಡೆಸಿರಲಿಲ್ಲ. ತಂದೆ ಬಾಳಾ ಠಾಕ್ರೆ ನಿಧನದ ಬಳಿಕ ಪಕ್ಷ ಪಕ್ಷದ ಹೊಣೆಹೊತ್ತ ಠಾಕ್ರೆ ಪುತ್ರ ಉದ್ಧವ್ ಠಾಕ್ರೆ ಕೂಡಾ ಇದುವರೆಗೂ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ. 2019 ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಠಾಕ್ರೆ ಕುಟುಂಬದ ಸದಸ್ಯ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಆದಿತ್ಯ ಠಾಕ್ರೆ ಮುಂದಿನ ಸಿಎಂ ಎಂದೇ ಶಿವಸೇನೆ ಬಿಂಬಿಸಿತ್ತು. ಆದರೆ ಈಗ ಉದ್ಧವ್ ಠಾಕ್ರೆಯೇ ಸಿಎಂ ಆಗುತ್ತಿದ್ದಾರೆ.

ತಂದೆ ಬಾಳಸಾಹೇಬ್ ಠಾಕ್ರೆ, ಚಿಕ್ಕಪ್ಪ ಶ್ರೀಕಾಂತ್ ಠಾಕ್ರೆ ಮತ್ತು ಚಿಕ್ಕಪ್ಪನ ಮಗ ರಾಜ್ ಠಾಕ್ರೆ ಅವರಂತೆಯೇ ಉದ್ಧವ್ ಕೂಡ ವ್ಯಂಗ್ಯಚಿತ್ರಕಾರ. ಚಿಕ್ಕಪ್ಪನ ಒಡನಾಟದಲ್ಲಿಯೇ ಹೆಚ್ಚು ಬೆಳೆದ ಉದ್ಧವ್, ಬಳಿಕ ಅವರ ಪ್ರಭಾವದಿಂದಲೇ ಛಾಯಾಗ್ರಹಣದತ್ತ ಹೊರಳಿದರು.

1985ರಲ್ಲಿ ಶಿವಸೇನಾ ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿತು. ಆ ಚುನಾವಣೆಯ ಪ್ರಚಾರದಲ್ಲಿ 25 ವರ್ಷದ ಉದ್ಧವ್ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಪ್ರತಿಷ್ಠಿತ ಜೆಜೆ ಅನ್ವಯಿಕ ಕಲಾ ಸಂಸ್ಥೆಯಿಂದ ಪದವಿ ಪಡೆದ ಅವರು ಸ್ನೇಹಿತರ ಜತೆಗೂಡಿ ಜಾಹೀರಾತು ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದರು. 1989ರಲ್ಲಿ ಶಿವಸೇನಾ ತನ್ನ ಮುಖವಾಣಿಯಾದ 'ಸಾಮ್ನಾ' ಆರಂಭಿಸಿದಾಗ ಅದರಲ್ಲಿ ಉದ್ಧವ್ ಪ್ರಮುಖ ಪಾತ್ರ ವಹಿಸಿದರು. ನಂತರ ಅದರ ಸಂಪಾದಕರೂ ಆದರು. 

2002ರಲ್ಲಿ ನಡೆದ ಬಿಎಂಸಿ ಚುನಾವಣೆಯಲ್ಲಿ ಉದ್ಧವ್ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಶಿವಸೇನಾ ಅಧಿಕಾರಕ್ಕೆ ಬಂದಿತು. 2003ರಲ್ಲಿ ಶಿವಸೇನಾದ ಮೊದಲ ಕಾರ್ಯಾಧ್ಯಕ್ಷರಾಗಿ ಉದ್ಧವ್ ನೇಮಕವಾದರು. ನಂತರ ಶಿವಸೇನಾದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ಉದ್ಧವ್, ತಮ್ಮ ಪ್ರತಿಸ್ಪರ್ಧಿಗಳಾದ ರಾಜ್ ಠಾಕ್ರೆ, ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರನ್ನು ಹಂತಹಂತವಾಗಿ ಪಕ್ಕಕ್ಕೆ ತಳ್ಳಿ ಬೆಳೆಯತೊಡಗಿದರು.

ಉದ್ಧವ್‌ರನ್ನು ಸಾರ್ವಜನಿಕವಾಗಿ ಟೀಕಿಸಿದ ರಾಣೆ ಅವರನ್ನು 2005ರಲ್ಲಿ ಉಚ್ಚಾಟನೆ ಮಾಡಲಾಯಿತು. ರಾಜ್ ಠಾಕ್ರೆ ಎಂಎನ್‌ಎಸ್‌ ನಿರ್ಮಿಸಿದರು.

2013ರಲ್ಲಿ ಬಾಳ ಠಾಕ್ರೆ ನಿಧನದ ಬಳಿಕ ಶಿವಸೇನಾ ಸಂಪೂರ್ಣವಾಗಿ ಉದ್ಧವ್ ಠಾಕ್ರೆ ಹಿಡಿತಕ್ಕೆ ಸಿಕ್ಕಿತು. ಈಗ ಶಿವಸೇನಾದಲ್ಲಿ ಉದ್ಧವ್ ಅವರಿಗೆ ಪರ್ಯಾಯವಾದ ನಾಯಕರಿಲ್ಲ. ತಮ್ಮ ಉತ್ತರಾಧಿಕಾರಿಯನ್ನಾಗಿ ಅವರು ಮಗ ಆದಿತ್ಯ ಠಾಕ್ರೆಯನ್ನು ಬೆಳೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com