ಅಯೋಧ್ಯಾ ಭೂ ವಿವಾದ: ವಿಚಾರಣೆ ಮುಕ್ತಾಯ, ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಅಯೋಧ್ಯಾ ರಾಮಮಂದಿರ-ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕಳೆದೆರಡು ತಿಂಗಳಿಂದ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಬುಧವಾರ ತೀರ್ಪನ್ನು ಕಾಯ್ದಿರಿಸಿದೆ.
ಸುಪ್ರೀಂ ಕೋರ್ಟ್, ಅಯೋಧ್ಯಾ
ಸುಪ್ರೀಂ ಕೋರ್ಟ್, ಅಯೋಧ್ಯಾ

ನವದೆಹಲಿ: ಅಯೋಧ್ಯಾ ರಾಮಮಂದಿರ-ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕಳೆದೆರಡು ತಿಂಗಳಿಂದ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಬುಧವಾರ ತೀರ್ಪನ್ನು ಕಾಯ್ದಿರಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ತೀರ್ಪನ್ನು ಕಾಯ್ದಿರಿಸಿರುವುದಾಗಿ ಪ್ರಕಟಿಸಿತು.

ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಶರದ್ ಅರವಿಮದ್ ಬೋಬ್ಡೆ, ಅಶೋಕ್ ಭೂಷಣ್, ಡಿ.ವೈ.ಚಂದ್ರಚೂಡ್ ಮತ್ತು ಎಸ್.ಅಬ್ದುಲ್ ನಸೀರ್ ಇದ್ದಾರೆ.

ಇದಕ್ಕೂ ಮುನ್ನ ವಿಚಾರಣೆಯ ಕೊನೆಯ ದಿನವಾದ ಇಂದು ನ್ಯಾಯಾಲಯ ಕೆಲ ಹೈಡ್ರಾಮಗಳಿಗೆ ಸಾಕ್ಷಿಯಾಯಿತು. ವಿಚಾರಣೆ ವೇಳೆ ಮಾಜಿ ಐಪಿಎಸ್ ಅಧಿಕಾರಿ  ಕಿಶೋರ್ ರಚಿಸಿರುವ ‘ಅಯೋಧ್ಯಾ ರಿವಿಸಿಟೆಡ್’ ಎಂಬ ಹೆಸರಿನ  ಪುಸ್ತಕವನ್ನು ಹಿಂದೂ ಮಹಾಸಭಾ ವಕೀಲ, ವಿಕಾಸ್ ಸಿಂಗ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್ ಧವನ್, ಪುಸ್ತಕ ಹಾಗೂ ನಕ್ಷೆಯನ್ನು ಹರಿದುಹಾಕಿದಾಗ ನ್ಯಾಯಾಲಯದಲ್ಲಿ ಕೆಲಕಾಲ ಗೊಂದಲ ಉಂಟಾಯಿತು.
  
1986ರಲ್ಲಿ ರಚಿಸಲಾಗಿರುವ ಈ ಪುಸ್ತಕವನ್ನು ನ್ಯಾಯಾಲಯ ದಾಖಲೆಯನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಧವನ್ ಆಕ್ಷೇಪಿಸಿದರು. ಆದರೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಪುಸ್ತಕ ಮತ್ತು ನಕ್ಷೆಯನ್ನು ಹರಿದು ಹಾಕಿದ ಸುನ್ನಿ ವಕ್ಫ್ ಮಂಡಳಿಯ ವಕೀಲ ರಾಜೀವ್ ಧವನ್ ಅವರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ತಾವು ಪೀಠದಿಂದ ಎದ್ದು ಹೋಗುವುದಾಗಿ ಎಚ್ಚರಿಕೆ ನೀಡಿದರು.
  
ಒಂದು ಹಂತದಲ್ಲಿ ವಕೀಲರು ಮತ್ತು ಮುಖ್ಯ ನ್ಯಾಯಮೂರ್ತಿಗಳ ನಡುವೆ ವಾಗ್ವಾದ ನಡೆಯಿತು. ಮತ್ತೊಂದೆಡೆ, ಅಯೋಧ್ಯೆಯ ವಿವಾದಕ್ಕೆ ಸಂಬಂಧಿಸಿದಂತೆ  ಇಂದು ವಾದ ಪ್ರತಿವಾದ ಮುಗಿದಿದ್ದು, ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪಿನ ಬಗ್ಗೆ ವ್ಯಾಪಕ ಕುತೂಹಲ ಕೆರಳಿಸಿದೆ.
  
ನ್ಯಾಯಪೀಠ ಈ ಹಿಂದೆ ತಿಳಿಸಿದ್ದಂತೆ ನಾಲ್ಕು ವಾರಗಳಲ್ಲಿ ಅಂದರೆ ನ.17ರೊಳಗೆ ತೀರ್ಪು ಹೊರಬೀಳುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಡಿ.10ರವರೆಗೆ ವಿವಾದಿತ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
  
ವಿವಾದಕ್ಕೆ ಸಂಬಂಧಿಸಿದಂತೆ ರಾಜಿ ಸಂಧಾನ ಪ್ರಕ್ರಿಯೆ ವಿಫಲವಾದ ಹಿನ್ನೆಲೆಯಲ್ಲಿ ಆ. 6ರಿಂದ ದಿನನಿತ್ಯದ ಆಧಾರದ ಮೇಲೆ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ಆರಂಭಿಸಿತ್ತು. ಇದಕ್ಕೂ ಮುನ್ನ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸುವ ಸಲುವಾಗಿ ನಿವೃತ್ತ ನ್ಯಾಯಮೂರ್ತಿ ಕಲೀಫುಲ್ಲ ನೇತೃತ್ವದ ತ್ರಿಸದಸ್ಯ ಸಮಿತಿ ರಚಿಸಲಾಗಿತ್ತು.
  
ಅಯೋಧ್ಯೆಯ ವಿವಾದಿತ 2.77 ಎಕರೆ ಭೂಮಿಯನ್ನು ನಿರ್ಮೋಹಿ ಅಕಾರ, ಸುನ್ನಿ ಕೇಂದ್ರ ವಕ್ಫ್ ಮಂಡಳಿ ಮತ್ತು ರಾಮಲಲ್ಲಾ ವಿರಾಜಮಾನ್ ಸಂಘಟನೆಗಳಿಗೆ ವಿಂಗಡಿಸಿ ಅಲಹಾಬಾದ್ ಹೈಕೋರ್ಟ್ 2010ರ ಸೆಪ್ಟೆಂಬರ್ ನಲ್ಲಿ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾದ ಮೇಲ್ಮನವಿ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com