ಖಾಸಗಿ ಪ್ರಯೋಗಾಲಯಗಳು ಕೊರೋನಾ ಪರೀಕ್ಷೆಗಳಿಗೆ ಹೆಚ್ಚಿನ ಶುಲ್ಕ ವಿಧಿಸುವಂತಿಲ್ಲ: ಸುಪ್ರೀಂ ಕೋರ್ಟ್
ನವದೆಹಲಿ: ಖಾಸಗಿ ಪ್ರಯೋಗಾಲಯಗಳು (ಲ್ಯಾಬ್‌ಗಳು) ಕೊರೋನಾವೈರಸ್ ಪರೀಕ್ಷೆಗಳಿಗೆಹೆಚ್ಚುವರಿ ಶುಲ್ಕ ವಿಧಿಸಬಾರದು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಹಾಗೆಯೇ ಈ ಪರೀಕ್ಷೆಗಳಿಗೆ ಖರ್ಚು ಮಾಡಿದ ಮೊತ್ತವನ್ನು ಮರುಪಾವತಿಸಬಹುದಾದ ಯಾಂತ್ರಿಕ ವ್ಯವಸ್ಥೆಯನ್ನು ಹುಡುಕಲು ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳಲ್ಲಿ ಎಲ್ಲಾ ನಾಗರಿಕರಿಗೆ ಉಚಿತ ಕೊರೋನಾವೈರಸ್ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದಿದೆ.
ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಹೆಡೆ ಎತ್ತಿರುವ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಮಧ್ಯೆ, ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ, ಖಾಸಗಿ ಪ್ರಯೋಗಾಲಯಗಳು ಇಂತಹ ಪರೀಕ್ಷೆಗಳಿಗೆ ಹೆಚ್ಚಿನ ಶುಲ್ಕ ವಿಧಿಸಬಾರದು ಎಂದು ಅಭಿಪ್ರಾಯಪಟ್ಟಿದೆ.ಮರುಪಾವತಿ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವ ಸಂಬಂಧ ಪರಿಗಣಿಸಲು ಕೇಂದ್ರ ಸರ್ಕಾರದ ಪ್ರತಿನಿಧಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಾಲಯ ಕೇಳಿದ ನಂತರ, ಈ ವಿಷಯದ ಬಗ್ಗೆ ಸರ್ಕಾರದಿಂದ ಸೂಚನೆಗಳನ್ನು ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ.
ವಿಡಿಯೋಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆದಿದ್ದು ಭಾರತದಲ್ಲಿನ 118 ಪ್ರಯೋಗಾಲಯಗಳು ದಿನಕ್ಕೆ 15,000 ಟೆಸ್ಟ್ ನಡೆಸುವ ಸಾಮರ್ಥ್ಯವನ್ನು ಹೊಂದಿವೆ, ಮತ್ತು 47 ಖಾಸಗಿ ಪ್ರಯೋಗಾಲಯಗಳು ಸಹ ಈ ಪರೀಕ್ಷೆ ನಡೆಸಲಿದೆ ಎಂದು ಮೆಹ್ತಾ ವಾದಿಸಿದರು. ಕೊರೋನಾ ಪರೀಕ್ಷೆಗಳಿಗೆ ಪ್ರಯೋಗಾಲಯಗಳು ಹಣ ವಿಧಿಸಲು ಅವಕಾಶ ಕಲ್ಪಿಸಬಾರದು ಎಂದು ನ್ಯಾಯಮೂರ್ತಿ ಭೂಷಣ್ ಹೇಳಿದ್ದಾರೆ.ಖಾಸಗಿ ಸಂಸ್ಥೆಗಳಿಂದ ಕರೋನಾ ಪರೀಕ್ಷೆಗೆ ಗರಿಷ್ಠ 4,500 ರೂಗಳನ್ನು ನಿಗದಿಪಡಿಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಲಹೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿತ್ತು.
ಅಂತಹ ಎಲ್ಲಾ ಪರೀಕ್ಷೆಗಳನ್ನು ಮಾನ್ಯತೆ ಪಡೆದ ರೋಗಶಾಸ್ತ್ರೀಯ ಪ್ರಯೋಗಾಲಯಗಳು ನಡೆಸಬೇಕು. ಹಾಗೆಯೇ ಸಂವಿಧಾನದ 14 ಮತ್ತು 21 ನೇ ವಿಧಿ ಉಲ್ಲಂಘನೆಯಾಗದಂತೆ ಇರಬೇಕೆಂದು ಅರ್ಜಿಯಲ್ಲಿ ಕೋರಿದೆ ಉಚಿತ ಪರೀಕ್ಷೆಗಳನ್ನು ಉಲ್ಲೇಖಿಸುತ್ತಾ ಅರ್ಜಿದಾರರು ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷಾ ಶುಲ್ಕವನ್ನು ವಿಧಿಸುವುದು ಸಂವಿಧಾನದ ಆದರ್ಶಗಳು ಮತ್ತು ಮೌಲ್ಯಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ