ಜಾಮಿಯಾ ಗಲಭೆ: ಶರ್ಜೀಲ್‌ ಇಮಾಮ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಕಳೆದ ಡಿಸೆಂಬರ್‌ ತಿಂಗಳಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಉಂಟಾದ ಗಲಭೆಗೆ ಪ್ರಚೋದನೆ ನೀಡಿದ ಮತ್ತು ದೇಶದ್ರೋಹದ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ಶರ್ಜೀಲ್ ಇಮಾಮ್‌ ವಿರುದ್ಧ ಶನಿವಾರ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕಳೆದ ಡಿಸೆಂಬರ್‌ ತಿಂಗಳಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಉಂಟಾದ ಗಲಭೆಗೆ ಪ್ರಚೋದನೆ ನೀಡಿದ ಮತ್ತು ದೇಶದ್ರೋಹದ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ಶರ್ಜೀಲ್ ಇಮಾಮ್‌ ವಿರುದ್ಧ ಶನಿವಾರ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಕಳೆದ ವರ್ಷದ ಡಿಸೆಂಬರ್ 13ರಂದು ದೇಶದ್ರೋಹದ ಭಾಷಣ ಮಾಡುವ ಮೂಲಕ ಜಾಮಿಯಾ ಗಲಭೆಗೆ ಉತ್ತೇಜನ ಮತ್ತು ಪ್ರಚೋದನೆ ನೀಡಿದ ಆರೋಪದಲ್ಲಿ ಇಮಾಮ್ ಅವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ತನಿಖೆಯ ವೇಳೆ ಸಂಗ್ರಹಿಸಲಾದ ಸಾಕ್ಷ್ಯಗಳ ಆಧಾರದಲ್ಲಿ ಐಪಿಸಿ 124 ಎ ಮತ್ತು ಐಪಿಸಿ 153 ಎ ( ಸಮುದಾಯಗಳ ನಡುವೆ ದ್ವೇಷ ಉಂಟು ಮಾಡುವುದು ಮತ್ತು ದೇಶದ್ರೋಹ) ಸೆಕ್ಷನ್‌ ಗಳನ್ನು ಕೂಡ ಸೇರಿಸಲಾಗಿದೆ.

ಆರಂಭದಲ್ಲಿ ಮೊದಲ ದೋಷಾರೋಪ ಪಟ್ಟಿಯನ್ನು ಕ್ರೈಂ ಬ್ರಾಂಚ್‌ ನಿಂದ ಬಂಧನಕ್ಕೊಳಗಾದವರ ವಿರುದ್ಧ ಈಗಾಗಲೇ ಸಲ್ಲಿಸಲಾಗಿದೆ. ಹಿಂದಿನ ಚಾರ್ಜ್‌ಶೀಟ್‌ನ ಮುಂದುವರಿಕೆಯಾಗಿ ಪೂರಕ ಚಾರ್ಜ್‌ಶೀಟ್ ಅನ್ನು ಈಗ ಎಂಎಂ ಸಾಕೇತ್‌ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.

ಕಳೆದ ವರ್ಷ ಡಿಸೆಂಬರ್ 15 ರಂದು, ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆ ಮತ್ತು ಜಾಮಿಯಾ ನಗರದ ವ್ಯಾಪ್ತಿಗೆ ಬರುವ ವಿಶ್ವವಿದ್ಯಾಲಯ ಕ್ಯಾಂಪಸ್‌ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಪೌರತ್ವ ಕಾನೂನಿನ ವಿರುದ್ಧ ಜಾಮಿಯಾ ವಿದ್ಯಾರ್ಥಿಗಳು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ್ದವು.

ಜನಸಮೂಹವು ದೊಡ್ಡ ಪ್ರಮಾಣದ ಗಲಭೆ, ಕಲ್ಲು ತೂರಾಟ ಮತ್ತು ಅಗ್ನಿಸ್ಪರ್ಶದಲ್ಲಿ ತೊಡಗಿತ್ತು. ಇದರ ಪರಿಣಾಮ ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿ ನಾಶವಾಗಿತ್ತು. ಅದರಂತೆ, ಎರಡೂ ಪೊಲೀಸ್ ಠಾಣೆಗಳಲ್ಲಿ ಗಲಭೆ, ಅಗ್ನಿಸ್ಪರ್ಶ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಪ್ರಕರಣಗಳನ್ನು ವಿವಿಧ ಕಲಂಗಳಡಿ ದಾಖಲಿಸಲಾಗಿತ್ತು.

ಗಲಭೆಯ ಸಂದರ್ಭದಲ್ಲಿ ಸಾರ್ವಜನಿಕರಲ್ಲದೆ ಹಲವಾರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com