ಪಿಎಂ-ಕೇರ್ಸ್ ಫಂಡ್ ಮತ್ತು ಲಾಕ್ ಡೌನ್ ಹಿಂದಿನ ಕಾರಣ ತಿಳಿಸಿ ಎಂದು ಕೇಳಿದ ಆರ್ ಟಿಐ ಅರ್ಜಿ ತಿರಸ್ಕರಿಸಿದ ಪಿಎಂಒ

ಕೋವಿಡ್-19 ಸಂಕಷ್ಟದ ಸಮಯದಲ್ಲಿ ಪ್ರಧಾನ ಮಂತ್ರಿ-ಕೇರ್ ನಿಧಿಗೆ ಇದುವರೆಗೆ ಸಂಗ್ರಹವಾಗಿರುವ ಮೊತ್ತ ಮತ್ತು ದಾನಿಗಳ ವಿವರ ಹಾಗೂ ಲಾಕ್ ಡೌನ್ ಹೇರಿಕೆ ಮಾಡಲು ವೈಜ್ಞಾನಿಕ ಕಾರಣಗಳೇನು ಎಂದು ಕೋರಿ ಸಲ್ಲಿಸಲಾಗಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ಉತ್ತರಿಸಲು ಪ್ರಧಾನ ಮಂತ್ರಿ ಕಾರ್ಯಾಲಯ ನಿರಾಕರಿಸಿ ತಿರಸ್ಕರಿಸಿದೆ.
ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಲಾಕ್ ಡೌನ್ ಸಮಯದಲ್ಲಿ ಕಂಡುಬಂದ ದೃಶ್ಯ
ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಲಾಕ್ ಡೌನ್ ಸಮಯದಲ್ಲಿ ಕಂಡುಬಂದ ದೃಶ್ಯ

ನವದೆಹಲಿ: ಕೋವಿಡ್-19 ಸಂಕಷ್ಟದ ಸಮಯದಲ್ಲಿ ಪ್ರಧಾನ ಮಂತ್ರಿ-ಕೇರ್ ನಿಧಿಗೆ ಇದುವರೆಗೆ ಸಂಗ್ರಹವಾಗಿರುವ ಮೊತ್ತ ಮತ್ತು ದಾನಿಗಳ ವಿವರ ಹಾಗೂ ಲಾಕ್ ಡೌನ್ ಹೇರಿಕೆ ಮಾಡಲು ವೈಜ್ಞಾನಿಕ ಕಾರಣಗಳೇನು ಎಂದು ಕೋರಿ ಸಲ್ಲಿಸಲಾಗಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ಉತ್ತರಿಸಲು ಪ್ರಧಾನ ಮಂತ್ರಿ ಕಾರ್ಯಾಲಯ ನಿರಾಕರಿಸಿ ತಿರಸ್ಕರಿಸಿದೆ.

ಸೋಷಿಯಲ್ ಆಕ್ಷನ್ ಫಾರ್ ಫಾರೆಸ್ಟ್ ಅಂಡ್ ಎನ್ವಿರಾನ್ ಮೆಂಟ್ ಸ್ಥಾಪಕ ವಿಕ್ರಾಂತ್ ಟೊಂಗಡ್ ಎಂಬುವವರು ಕಳೆದ 24ರಂದು ವಿವರ ಕೇಳಿ ಆರ್ ಟಿಐ ಅಡಿಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಮೂರೇ ದಿನಗಳಲ್ಲಿ ಉತ್ತರ ನೀಡಿರುವ ಪ್ರಧಾನ ಮಂತ್ರಿ ಕಾರ್ಯಾಲಯ ಅರ್ಜಿದಾರರು ವಿವೇಚನೆಯಿಲ್ಲದ ಅಪ್ರಯೋಗಿಕ ಬೇಡಿಕೆಗಳನ್ನಿಟ್ಟಿದ್ದಾರೆ. ಹೀಗಾಗಿ ಉತ್ತರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಟೊಂಗಡ್ ತಮ್ಮ ಅರ್ಜಿಯಲ್ಲಿ, ಲಾಕ್ ಡೌನ್ ಗೆ ಸಂಬಂಧಿಸಿದ ಸಭೆಗಳ ವಿವರಗಳು, ಕೋವಿಡ್-19ಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ಕಾರ್ಯತಂತ್ರಗಳು, ಕೇಂದ್ರ ಸರ್ಕಾರದ ಕೊರೋನಾ ಪರೀಕ್ಷಾ ಕಿಟ್ ಗಳು ಮತ್ತು ಅವುಗಳ ರಾಜ್ಯವಾರು ವಿತರಣೆ ಅಂಕಿಅಂಶಗಳ ಬಗ್ಗೆ ಮಾಹಿತಿ ಕೇಳಿದ್ದರು.

ಸುಪ್ರೀಂ ಕೋರ್ಟ್ 2011ರಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಕಾರ್ಯಾಲಯ, ಆರ್ ಟಿಐ ಕಾಯ್ದೆಯಡಿ ಕೇಳಲಾಗುವ ಅಸಮರ್ಪಕ ಮತ್ತು ವಿವೇಚನೆರಹಿತವಾದ ಪ್ರಶ್ನೆಗಳಿಂದ ಆಡಳಿತದ ದಕ್ಷತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಿದೆ. 2009ರ ಕೇಂದ್ರ ಮಾಹಿತಿ ಆಯೋಗದ ಆದೇಶವನ್ನು ಸಹ ಉಲ್ಲೇಖಿಸಿದ ಕಾರ್ಯಾಲಯ ಅರ್ಜಿಯಲ್ಲಿ ಹಲವು ವಿಸ್ತಾರ ವಿಷಯಗಳ ಬಗ್ಗೆ ಪ್ರಶ್ನಿಸಲಾಗಿದೆ. ಹಲವು ಸರಣಿ ಪ್ರಶ್ನೆಗಳನ್ನು ಒಂದು ಅರ್ಜಿಯಲ್ಲಿ ಆರ್ ಟಿಐಯಡಿ ಕೇಳಲು ಸಾಧ್ಯವಿಲ್ಲ. ಈ ಬಗ್ಗೆ ಇನ್ನು ಹೆಚ್ಚಿನ ಪ್ರತಿಕ್ರಿಯೆ ಅಗತ್ಯವಿಲ್ಲ ಎಂದು ಹೇಳಿದೆ.

ಪಿಎಂ ಕೇರ್ಸ್ ಫಂಡ್ ಬಗ್ಗೆ ವಿರೋಧ ಪಕ್ಷ ಮತ್ತು ನಾಗರಿಕ ಸಮಾಜ ಕೂಡ ಕಳವಳ ವ್ಯಕ್ತಪಡಿಸಿದ್ದವು. ಅದನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ನಿಧಿಯ ಜೊತೆ ಪಾರದರ್ಶಕತೆ ಕಾಪಾಡಲು ಒಟ್ಟು ಸೇರಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com