'ರಾಖಿ ಕಟ್ಟಿ ಸೋದರನಂತೆ ನೋಡಿಕೊಳ್ಳುತ್ತೇನೆಂದು ಮಾತುಕೊಟ್ಟು ಬಾ': ಆರೋಪಿಗೆ ಮ.ಪ್ರ. ಹೈಕೋರ್ಟ್ ಷರತ್ತುಬದ್ಧ ಜಾಮೀನು!

ಮಹಿಳೆ ಮೇಲೆ ಲೈಂಗಿಕ ಹಲ್ಲೆ ನಡೆಸಲು ಯತ್ನಿಸಿದ ಆರೋಪದ ಮೇಲೆ ಜೈಲು ಸೇರಿದ್ದ ಆರೋಪಿಗೆ ರಕ್ಷಾಬಂಧನ ಸಮಯದಲ್ಲಿ ಷರತ್ತುಬದ್ಧ ಜಾಮೀನು ನೀಡಿದ ಮಧ್ಯ ಪ್ರದೇಶ ಕೋರ್ಟ್ ನ ಇಂದೋರ್ ಪೀಠ, ಇಂದು ದೂರು ಕೊಟ್ಟ ಮಹಿಳೆಯ ಮನೆಗೆ ಹೋಗಿ ರಾಖಿ ಕಟ್ಟಿಸಿಕೊಂಡು ಜೀವನಪೂರ್ತಿ ಸೋದರನಂತೆ ರಕ್ಷಣೆಯಿಂದ ನೋಡಿಕೊಳ್ಳುವುದಾಗಿ ಮಾತುಕೊಟ್ಟು ಬರುವಂತೆ ಸೂಚಿಸಿದೆ.
ಮಧ್ಯ ಪ್ರದೇಶ ಹೈಕೋರ್ಟ್
ಮಧ್ಯ ಪ್ರದೇಶ ಹೈಕೋರ್ಟ್
Updated on

ಭೋಪಾಲ್: ಮಹಿಳೆ ಮೇಲೆ ಲೈಂಗಿಕ ಹಲ್ಲೆ ನಡೆಸಲು ಯತ್ನಿಸಿದ ಆರೋಪದ ಮೇಲೆ ಜೈಲು ಸೇರಿದ್ದ ಆರೋಪಿಗೆ ರಕ್ಷಾಬಂಧನ ಸಮಯದಲ್ಲಿ ಷರತ್ತುಬದ್ಧ ಜಾಮೀನು ನೀಡಿದ ಮಧ್ಯ ಪ್ರದೇಶ ಕೋರ್ಟ್ ನ ಇಂದೋರ್ ಪೀಠ, ಇಂದು ದೂರು ಕೊಟ್ಟ ಮಹಿಳೆಯ ಮನೆಗೆ ಹೋಗಿ ರಾಖಿ ಕಟ್ಟಿಸಿಕೊಂಡು ಜೀವನಪೂರ್ತಿ ಸೋದರನಂತೆ ರಕ್ಷಣೆಯಿಂದ ನೋಡಿಕೊಳ್ಳುವುದಾಗಿ ಮಾತುಕೊಟ್ಟು ಬರುವಂತೆ ಸೂಚಿಸಿದೆ.

ಇದೊಂದು ಅಪರೂಪದ ವಿಶಿಷ್ಟ ತೀರ್ಪು ಆಗಿದ್ದು ಜಾಮೀನು ಪಡೆದವ ತನ್ನ ಪತ್ನಿಯೊಂದಿಗೆ ಇಂದು ದೂರು ಕೊಟ್ಟ ಮಹಿಳೆಯ ಮನೆಗೆ ರಾಖಿ ಮತ್ತು ಸಿಹಿತಿಂಡಿ ಬಾಕ್ಸ್ ನೊಂದಿಗೆ ಹೋಗಿ ಇನ್ನು ಮುಂದೆ ತಮ್ಮನ್ನು ರಕ್ಷಣೆಯಿಂದ ನೋಡಿಕೊಳ್ಳುತ್ತೇನೆಂದು ಮಾತು ಕೊಟ್ಟು ಆಕೆಯ ಕೈಯಿಂದ ರಾಖಿ ಕಟ್ಟಿಸಿಕೊಂಡು ಬರಬೇಕು ಎಂದು ಮಧ್ಯ ಪ್ರದೇಶ ಹೈಕೋರ್ಟ್ ನ ಇಂದೋರ್ ಏಕಪೀಠ ನ್ಯಾಯಾಲಯದ ನ್ಯಾಯಾಧೀಶ ರೋಹಿತ್ ಆರ್ಯ ಕಳೆದ ಜುಲೈ 30ರಂದು ನೀಡಿದ್ದ ಷರತ್ತುಬದ್ಧ ತೀರ್ಪಿನಲ್ಲಿ ಹೇಳಿದ್ದಾರೆ.

ರಾಖಿ ಕಟ್ಟಿದ ವೇಳೆ ಸೋದರರು ಸೋದರಿಯರಿಗೆ ಉಡುಗೊರೆ, ಹಣ ನೀಡುವ ಸಂಪ್ರದಾಯವಿದ್ದು ಆಕೆಗೆ 11 ಸಾವಿರ ರೂಪಾಯಿ ಕೊಟ್ಟು ಆಕೆಯ ಆಶೀರ್ವಾದ ಕೇಳುವಂತೆ ನ್ಯಾಯಾಧೀಶರು ಹೇಳಿದರು. ಮಹಿಳೆಯ ಮಗನಿಗೆ ಬಟ್ಟೆ, ಸಿಹಿತಿಂಡಿ ಖರೀದಿಸಲು ಮತ್ತೆ 5 ಸಾವಿರ ರೂಪಾಯಿ ಕೊಡುವಂತೆ ಸಹ ನ್ಯಾಯಾಧೀಶರು ಜಾಮೀನು ಪಡೆದವನಿಗೆ ಸೂಚಿಸಿದ್ದಾರೆ.

ಜಾಮೀನು ಪಡೆದವ ಮನೆಗೆ ಹೋಗಿ ರಾಖಿ ಕಟ್ಟಿದ್ದು, ಹಣ ಕೊಟ್ಟಿರುವ ಫೋಟೋ ಮತ್ತು ರಶೀದಿಯನ್ನು ಇಟ್ಟುಕೊಳ್ಳಬೇಕು, ಅದನ್ನು ವಕೀಲರ ಮೂಲಕ ಹೈಕೋರ್ಟ್ ನ ದಾಖಲೆಗಳಲ್ಲಿ ಇಟ್ಟುಕೊಳ್ಳಲು ಕೊಡಬೇಕು, ದೂರುದಾರ ಮಹಿಳೆ ಮತ್ತು ಜಾಮೀನು ಪಡೆದುಕೊಂಡವರ ವಿಳಾಸ ಸಹ ನಮೂದಿಸಬೇಕು ಎಂದು ಸಹ ದೂರುದಾರ ಮಹಿಳೆಗೆ ನ್ಯಾಯಾಧೀಶರು ತಿಳಿಸಿದ್ದಾರೆ.

ನ್ಯಾಯಾಲಯಕ್ಕೆ 50 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ನೊಂದಿಗೆ 7 ಷರತ್ತುಗಳನ್ನು ವಿಧಿಸಿ ನ್ಯಾಯಾಧೀಶರು ಜಾಮೀನು ನೀಡಿದರು.

ಘಟನೆ ಏನಾಗಿತ್ತು: ಕಳೆದ ಜೂನ್ ತಿಂಗಳಲ್ಲಿ ಉಜ್ಜೈನಿ ಜಿಲ್ಲೆಯ ಬತ್ಪಚಲನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ವಿರುದ್ಧ ಕೇಸು ದಾಖಲಾಗಿ ಬಂಧಿಸಲ್ಪಟ್ಟಿದ್ದ. ಪಕ್ಕದ ಮನೆಯ ಮಹಿಳೆ ಮನೆಗೆ ನುಗ್ಗಿ ಆಕೆಯ ಮೇಲೆ ಲೈಂಗಿಕ ಹಲ್ಲೆ ನಡೆಸಲು ಯತ್ನಿಸಿದ್ದ. ಇದಕ್ಕೆ ಸಂಬಂಧಪಟ್ಟಂತೆ ಮಹಿಳೆ ದೂರು ಕೊಟ್ಟು ಬಂಧನವಾಗಿತ್ತು.

ಈ ಹಿಂದೆ ಮಧ್ಯಪ್ರದೇಶ ಹೈಕೋರ್ಟ್ ನ ಗ್ವಾಲಿಯರ್ ಪೀಠ ಕೂಡ ಇಂತಹ ವಿಶೇಷ ತೀರ್ಪು ನೀಡಿ ಸುದ್ದಿಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com