'ಹಲವು ಸಂದರ್ಭಗಳಲ್ಲಿ ವಾಜಪೇಯಿಯವರ ಮೌನ ಮಾತಿಗಿಂತ ಹೆಚ್ಚು ಶಕ್ತಿಯುತವಾಗಿತ್ತು': ಪ್ರಧಾನಿ ಮೋದಿ ಸ್ಮರಣೆ 

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಎರಡನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಹಿರಿಯ ನಾಯಕನನ್ನು ಸ್ಮರಿಸುವ ಸುಮಾರು ಎರಡು ನಿಮಿಷಗಳ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಮತ್ತು ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಅಟಲ್ ಬಿಹಾರಿ ವಾಜಪೇಯಿ ಮತ್ತು ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಎರಡನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಹಿರಿಯ ನಾಯಕನನ್ನು ಸ್ಮರಿಸುವ ಎರಡು ನಿಮಿಷಗಳ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅಟಲ್ ಜಿಯವರಿಗೆ ಪುಣ್ಯತಿಥಿಯ ಸಂದರ್ಭದಲ್ಲಿ ಅವರಿಗೆ ನಮನಗಳು. ದೇಶದ ಬೆಳವಣಿಗೆಗೆ ಅವರ ಪ್ರಯತ್ನ ಮತ್ತು ಅದ್ವಿತೀಯ ಸೇವೆಯನ್ನು ಭಾರತ ಎಂದೆಂದಿಗೂ ಸ್ಮರಿಸುತ್ತದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ವಾಜಪೇಯಿಯವರೊಂದಿಗಿನ ಒಡನಾಟದ ವಿಡಿಯೊವನ್ನು ಮೋದಿ ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಧಾನಿ ಮೋದಿಯವರ ಧ್ವನಿಯಿದೆ. ''ಈ ದೇಶ ಯಾವತ್ತಿಗೂ ಅಟಲ್ ಜೀಯವರ ತ್ಯಾಗವನ್ನು ಮರೆಯುವುದಿಲ್ಲ, ಅವರ ನಾಯಕತ್ವದಲ್ಲಿ ಪರಮಾಣು ಶಕ್ತಿಯಲ್ಲಿ ಭಾರತ ಮತ್ತೊಂದು ಹಂತಕ್ಕೆ ಹೋಗಿ ಮೈಲುಗಲ್ಲು ಸ್ಥಾಪಿಸಿತು. ರಾಜಕಾರಣಿಯಾಗಿ, ಸಂಸದರಾಗಿ, ಸಚಿವರಾಗಿ ಅಥವಾ ಪ್ರಧಾನ ಮಂತ್ರಿಯಾಗಿ ಅಟಲ್ ಅವರು ಹಲವು ಪಾತ್ರಗಳನ್ನು ನಿರ್ವಹಿಸಿದ್ದರು. ಅವರ ಜೀವನದ ಬಗ್ಗೆ ಹಲವು ವಿಷಯಗಳನ್ನು ಮಾತನಾಡಬಹುದು. ಅವರ ಭಾಷಣದ ಬಗ್ಗೆ ದೇಶದ ಜನ ಮಾತನಾಡುತ್ತಾರೆ. ಭವಿಷ್ಯದಲ್ಲಿ ಕೆಲವು ತಜ್ಞರು ಅವರ ಭಾಷಣಗಳನ್ನು ವಿಶ್ಲೇಷಿಸುವುದಾದರೆ ಹಲವು ಸಂದರ್ಭಗಳಲ್ಲಿ ಅವರ ಮೌನ ಮಾತಿಗಿಂತ ಹೆಚ್ಚು ಶಕ್ತಿಶಾಲಿಯಾಗಿತ್ತು, ಜನರು ಅವರ ಮೌನದಿಂದ ಸಂದೇಶಗಳನ್ನು ಪಡೆಯುತ್ತಿದ್ದರು. ಸಂಸತ್ತಿನಲ್ಲಿ ಕೆಲವೊಂದು ಸಂದರ್ಭಗಳಲ್ಲಿ ಅವರು ಅಲ್ಪ ಮಾತುಗಳಿಗೆ ಶರಣಾಗುತ್ತಿದ್ದರು. ಇದು ಅವರ ಸೂಕ್ಷ್ಮಮತಿ ಎಂದು ಪ್ರಧಾನಿ ಹೇಳಿದ್ದಾರೆ.

ವಿಡಿಯೊದ ಕೊನೆಗೆ ಮೋದಿಯವರು ವಾಜಪೇಯಿಯವರ ಆಶೀರ್ವಾದ ಪಡೆಯುವ ಫೋಟೋಗಳಿವೆ. 

ಗೃಹ ಸಚಿವ ಅಮಿತ್ ಶಾ ಕೂಡ ಮಾಜಿ ಪ್ರಧಾನಿಯವರನ್ನು ಸ್ಮರಿಸಿ ಟ್ವೀಟ್ ಮಾಡಿದ್ದಾರೆ. ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರು ದೇಶಭಕ್ತಿ ಮತ್ತು ಭಾರತೀಯ ಸಂಸ್ಕೃತಿಯ ಧ್ವನಿ ಎಂದು ಕೊಂಡಾಡಿದ್ದಾರೆ. 

ಅಟಲ್ ಬಿಹಾರಿ ವಾಜಪೇಯಿ ಹುಟ್ಟಿದ್ದು ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ 1924ರ ಡಿಸೆಂಬರ್ 25ರಂದು. ಬಿಜೆಪಿಯಿಂದ ದೇಶದ ಪ್ರಧಾನಿಯಾದ ಮೊದಲ ನಾಯಕ. ಅವರು ಕೇವಲ ರಾಜಕಾರಣಿ ಮಾತ್ರವಲ್ಲದೆ ಖ್ಯಾತ ಕವಿ, ಸಾಹಿತಿ ಕೂಡ ಹೌದು. ಅವರ ಹುಟ್ಟುಹಬ್ಬದಂದು ಉತ್ತಮ ಆಡಳಿತ ದಿನ ಎಂದು ಆಚರಿಸಿಕೊಂಡು ಬರಲಾಗುತ್ತಿದೆ.  ವಾಜಪೇಯಿಯವರು ಆಗಸ್ಟ್ 16, 2018ರಲ್ಲಿ ನಿಧನ ಹೊಂದಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com