ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಉಪಾಧ್ಯಕ್ಷ ಎನ್ ರವೀಂದ್ರನ್ ನಿಧನ

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಉಪಾಧ್ಯಕ್ಷ ಎನ್. ರವೀಂದ್ರನ್ ನಿಧನರಾಗಿದ್ದಾರೆ. 
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಉಪಾಧ್ಯಕ್ಷ ಎನ್ ರವೀಂದ್ರನ್ ನಿಧನ
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಉಪಾಧ್ಯಕ್ಷ ಎನ್ ರವೀಂದ್ರನ್ ನಿಧನ

ಚೆನ್ನೈ: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಉಪಾಧ್ಯಕ್ಷ ಎನ್. ರವೀಂದ್ರನ್ ನಿಧನರಾಗಿದ್ದಾರೆ. 

ಚೆನ್ನೈ ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ರವೀಂದ್ರನ್ (53) ಅವರು ಹೃದಯ ಸ್ತಂಭನದಿಂದಾಗಿ ಮೃತಪಟ್ಟಿದ್ದು, ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 

25 ವರ್ಷಗಳ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆಗೆ ಸೇರ್ಪಡೆಯಾಗಿದ್ದ ರವೀಂದ್ರನ್ ಅವರು ಕ್ರಮೇಣ ಸಂಸ್ಥೆಯ ಐಟಿ ವಿಭಾಗವನ್ನು ಮುನ್ನಡೆಸಿ, ಸಮಗ್ರ ತಂತ್ರಜ್ಞಾನ ಪುನರುಜ್ಜೀವನ ಮತ್ತು ನವೀಕರಣಕ್ಕೆ ಪ್ರಮುಖ ಕೊಡುಗೆ ನೀಡಿದ್ದರು. 

ಸವಾಲುಗಳನ್ನು ತೆಗೆದುಕೊಂಡು ಯಶಸ್ವಿಯಾಗಿ ಸಮಸ್ಯೆಗಳನ್ನು ಬಗೆಹರಿಸಿ, ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದ್ದ ರವೀಂದ್ರನ್ ಅವರು ಸಂಸ್ಥೆಯ ಪಾಲಿನ ಟ್ರಬಲ್ ಶೂಟರ್ ಆಗಿದ್ದರು. 

ಮುದ್ರಣ ಮಾಧ್ಯಮದ ಉದ್ಯಮದ ಎಲ್ಲಾ ಅಂಶಗಳ ಬಗ್ಗೆಯೂ ತೀವ್ರ ಆಸಕ್ತಿ ವಹಿಸಿದ್ದ ಅವರು, ಪರಿಹಾರ ಒದಗಿಸುವವ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಕಾಲೇಜು ದಿನಗಳಿಂದಲೂ ಸಹಪಾಠಿಗಳಿಗೆ ಕಲಿಸುತ್ತಿದ್ದ ವ್ಯಕ್ತಿತ್ವ ಹೊಂದಿದ್ದ ರವೀಂದ್ರನ್ ಅವರು ಕೊನೆಯ ವರೆಗೂ ಈ ತತ್ವವನ್ನೇ ಪಾಲಿಸಿ ಸಂಸ್ಥೆ ಉದ್ಯೋಗಕ್ಕೆ ತೆಗೆದುಕೊಂಡಿದ್ದ ಐಟಿ ಪದವೀಧರರಿಗೂ ಮಾರ್ಗದರ್ಶನ ನೀಡಿ ಅವರ ವೃತ್ತಿ ಜೀವನದ ಏಳಿಗೆಗೆ ಸಹಕಾರಿಯಾಗಿದ್ದರು. 

ಯಾವುದೇ ಉತ್ತಮ ಆಲೋಚನೆಗಳು ತಮ್ಮಲ್ಲಿಗೆ ಬಂದರೂ ಅದನ್ನು ಆಲಿಸಿ ತಮ್ಮ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದ್ದ ರವೀಂದ್ರನ್ ಅವರ ಅನುಪಸ್ಥಿತಿ ಸಂಸ್ಥೆಯನ್ನು ಕಾಡಲಿದೆ. 

ನೌಕರಿಯಷ್ಟೇ ಅಲ್ಲದೇ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದ ರವೀಂದ್ರನ್ ಅವರು ತಮ್ಮ ನಿವಾಸವಿದ್ದ ನೊಳಂಬೂರ್ ಪ್ರದೇಶದಲ್ಲಿನ ಸಮುದಾಯದ ಅಭಿವೃದ್ಧಿಗೂ ಶ್ರಮಿಸಿದ್ದರು. ನೊಳಂಬೂರ್ ನಲ್ಲಿ ರಸ್ತೆಗಳ ನಿರ್ಮಾಣ, ಬಸ್ ನಿಲ್ದಾಣ, ಬಸ್ ಸಂಚಾರ ಸಂಪರ್ಕವನ್ನು ಹೆಚ್ಚಾಗುವಂತೆ ಮಾಡುವುದರಲ್ಲಿಯೂ ಅವರ ಪಾತ್ರ ಮಹತ್ವವಾದದ್ದು. 

ಸಾಮಾಜಿಕ ಕ್ಷೇತ್ರದಲ್ಲಿ ರವೀಂದ್ರನ್ ಅವರ ಸೇವೆಯನ್ನು ಗುರುತಿಸಿತ್ತು ರೋಟರಿ ಕ್ಲಬ್. ಕಲಾ ಕ್ಷೇತ್ರದಲ್ಲೂ ಆಸಕ್ತಿ ಹೊಂದಿದ್ದ ರವೀಂದ್ರನ್ ಅವರು ತಮ್ಮ ಪುತ್ರಿಯರಿಗೆ ಇದ್ದ ಶಾಸ್ತ್ರೀಯ ನೃತ್ಯ ಪ್ರಕಾರಗಳೆಡೆಗಿನ ಆಸಕ್ತಿಯನ್ನು ಉತ್ತೇಜಿಸಿದ್ದರು.  ಅಷ್ಟೇ ಅಲ್ಲದೇ ಹಲವು ಯುವಕರ ವಿದ್ಯಾಭ್ಯಾಸಕ್ಕೂ ಸಹ ರವೀಂದ್ರನ್ ಸಹಕಾರಿಯಾಗಿದ್ದರು. 

ಅವರ ಜೀವನೋತ್ಸಾಹ ಎಲ್ಲರಿಗೂ ಮಾದರಿಯಾಗಿತ್ತು. ಟಿಎನ್ಐಇ ಸಮೂಹ ಸಂಸ್ಥೆಗೆ ರವೀಂದ್ರನ್ ಅವರ ಅನುಪಸ್ಥಿತಿ ಬಹು ಅಂಶಗಳಲ್ಲಿ ಕಾಡಲಿದೆ. ಸಂಸ್ಥೆಯ ಆಡಳಿತ ಹಾಗೂ ಸಿಬ್ಬಂದಿಗಳು ರವೀಂದ್ರನ್ ಅವರ ಅಕಾಲಿಕ ನಿಧನಕ್ಕೆ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com