ಉಗ್ರ ಗುಂಪಿನೊಂದಿಗೆ ನಂಟಿದ್ದ ವಿದೇಶಿ ಏಜೆನ್ಸಿಗಳಿಂದ ಹಣ ಪಡೆದಿದ್ದಕ್ಕಾಗಿ ಅಜ್ಮಲ್ ಫೌಂಡೇಶನ್ ವಿರುದ್ಧ ಎಫ್ ಐಆರ್
ಗುವಾಹಟಿ: ಉಗ್ರರ ಗುಂಪಿನೊಂದಿಗೆ ನಂಟು ಹೊಂದಿದ್ದ ಕೆಲ ವಿದೇಶಿ ಏಜೆನ್ಸಿಗಳಿಂದ ಹಣ ಪಡೆದಿದ್ದಕ್ಕಾಗಿ ಅಸ್ಸಾಂ ಸಂಸದ ಮೌಲಾನಾ ಬದ್ರುದ್ದೀನ್ ಅಜ್ಮಲ್ ನಡೆಸುತ್ತಿದ್ದ ಅಜ್ಮಲ್ ಫೌಂಡೇಷನ್ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಕಾನೂನು ಹಕ್ಕುಗಳ ವೀಕ್ಷಣಾಲಯ ಸ್ವಯಂ ಸೇವಾ ಸಂಸ್ಥೆಯ ವರದಿ ಆಧಾರದ ಮೇಲೆ ಬಲ ಪಂಥೀಯ ಮುಖಂಡ ಸತ್ಯ ರಂಜನ್ ಬೋರಾ ಶುಕ್ರವಾರ ದೂರು ದಾಖಲಿಸಿದ್ದರು.
ಎಐಯುಡಿಎಫ್ ಮುಖ್ಯಸ್ಥ , ಮೌಲಾನಾ ಬದ್ರುದ್ದೀನ್ ಅಜ್ಮಲ್ ನಡೆಸುತ್ತಿರುವ ಅಜ್ಮಲ್ ಫೌಂಡೇಶನ್ ಗೆ ವಿವಿಧ ಉಗ್ರ ಗುಂಪುಗಳಿಗೆ ಹಣ ಪೂರೈಕೆ ಮಾಡುವ ಕೆಲ ವಿದೇಶಿ ಏಜೆನ್ಸಿಗಳಿಂದ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಹಣ ಬರುತ್ತಿರುವುದಾಗಿ ಕಾನೂನು ಹಕ್ಕುಗಳ ವೀಕ್ಷಣಾಲಯ ಸ್ವಯಂ ಸೇವಾ ಸಂಸ್ಥೆ ವರದಿ ಮಾಡಿದೆ.
ವರದಿಯನ್ನು ಪರಿಗಣಿಸಿ, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು, ಅಜ್ಮಲ್ ಫೌಂಡೇಶನ್ ವಿದೇಶಿ ಹಣವನ್ನು ಹಲವಾರು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ದುರುಪಯೋಗಪಡಿಸಿಕೊಂಡಿದೆ" ಎಂದು ಬೋರಾ ಎಫ್ ಐಆರ್ ನಲ್ಲಿ ಆರೋಪಿಸಿದ್ದಾರೆ.
ಅಜ್ಮಲ್ ಫೌಂಡೇಶನ್ ಶಿಕ್ಷಣಕ್ಕಾಗಿ 69.55 ಕೋಟಿ ರೂಪಾಯಿಯನ್ನು ವಿದೇಶಿ ಏಜೆನ್ಸಿಗಳಿಂದ ಪಡೆದಿದೆ. ಅದರಲ್ಲಿ ಕೇವಲ 2.05ಕೋಟಿಯನ್ನು ಅದಕ್ಕೆ ಬಳಸಿದ್ದು, ಉಳಿದಿದ್ದನ್ನು ಎಐಯುಡಿಎಫ್ ಗೆ ಪೂರೈಸಿದೆ ಎಂದು ಎಲ್ ಆರ್ ಒ ಟ್ವೀಟ್ ಮಾಡಿದೆ. ಈ ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ತನಿಖೆ ನಡೆಸುವ ವಿಶ್ವಾಸವಿದೆ ಎಂದು ಅಸ್ಸಾಂ ಸಚಿವ ಹಿಮಾಂತಾ ಬಿಸ್ವಾ ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ