ಭದ್ರತೆಯ ಕಾರಣಗಳಿಂದಾಗಿ ಪ್ರಧಾನಿಗಳ ವಿಮಾನ ಪ್ರಯಾಣದ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ: ವಾಯುಪಡೆ
ನವದೆಹಲಿ: ಪ್ರಧಾನಮಂತ್ರಿಯವರ ಭದ್ರತೆಯ ವಿಷಯವಾಗಿರುವುದರಿಂದ ಅವರ ವಿಮಾನ ಪ್ರಯಾಣದ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಭಾರತೀಯ ವಾಯುಪಡೆ ಹೈಕೋರ್ಟ್ ನಲ್ಲಿ ಹೇಳಿಕೆ ಸಲ್ಲಿಸಿದೆ.
ಪ್ರಧಾನ ಮಂತ್ರಿಯವರ ವಿಮಾನಯಾನದ ವಿವರಗಳನ್ನು ವಿಶೇಷ ವಿಮಾನ ರಿಟರ್ನ್ಸ್(ಎಸ್ಆರ್ ಎಫ್)11 ಮೂಲಕ ನೀಡಿ ಎಂದು ಕೇಂದ್ರ ಮಾಹಿತಿ ಆಯೋಗ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಭಾರತೀಯ ವಾಯುಪಡೆ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.
ಪ್ರಧಾನಿಯವರ ವಿಮಾನಯಾನ ವಿವರಗಳನ್ನು ಕೇಳಿರುವ ಮಾಹಿತಿ ಆಯೋಗ ಅದರಲ್ಲಿ ಇತರ ವಿವರಗಳಾದ ಅವರ ಜೊತೆ ಪ್ರಯಾಣಿಸುವವರು, ವಿಶೇಷ ಭದ್ರತಾ ಪಡೆಗಳ ಸಿಬ್ಬಂದಿಗಳ ಬಗ್ಗೆ ಕೇಳಿದ್ದು ಇದರಿಂದ ವಿದೇಶ ಪ್ರಯಾಣದ ವೈಯಕ್ತಿಕ ಸುರಕ್ಷತೆ ಮೇಲೆ ಪರಿಣಾಮ ಬೀರುತ್ತದೆ. ಇವುಗಳನ್ನೆಲ್ಲ ಬಹಿರಂಗಪಡಿಸಿದರೆ ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವ,ಕಾರ್ಯತಂತ್ರ, ವೈಜ್ಞಾನಿಕ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ಧಕ್ಕೆಯುಂಟಾಗುತ್ತದೆ ಎಂದು ಭಾರತೀಯ ವಾಯುಪಡೆ ತನ್ನ ಅರ್ಜಿಯಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರದ ಸಲಹಾ ತಂಡದ ಹಿರಿಯ ವಕೀಲ ರಾಹುಲ್ ಶರ್ಮ ಮತ್ತು ಅಡ್ವೊಕೇಟ್ ಸಿ ಕೆ ಭಟ್ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಕಳೆದ ಜುಲೈ 8ರಂದು ಕೇಂದ್ರ ಮಾಹಿತಿ ಆಯೋಗ ವಾಯುಪಡೆಯಲ್ಲಿ ಪ್ರಧಾನಿಗಳ ವಿಮಾನ ಪ್ರಯಾಣದ ವಿವರಗಳನ್ನು ಕೇಳಿತ್ತು.
2013ರಿಂದ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಮತ್ತು 2014ರ ನಂತರ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ವಿದೇಶ ಪ್ರಯಾಣಗಳ ವಿವರಗಳನ್ನು ಕೇಳಲಾಗಿತ್ತು. ಈ ಅರ್ಜಿ ವಿಚಾರಣೆ ನಾಡಿದ್ದು ಶುಕ್ರವಾರ ವಿಚಾರಣೆಗೆ ಬರಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ