ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ರದ್ದುಪಡಿಸಲು ಪಟ್ಟು ಹಿಡಿದಿರುವ ರೈತ ಪರ ಸಂಘಟನೆಗಳು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಸಜ್ಜುಗೊಳ್ಳುತ್ತಿರುವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪರ್ಯಾಯ ಆಯ್ಕೆಯ ಹುಡುಕಾಟದಲ್ಲಿ ನಿರತರಾಗಿದ್ದಾರೆ.
ಬುಧವಾರ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನರೇಂದ್ರ ಸಿಂಗ್ ತೋಮರ್, ರೈತರ ಪ್ರತಿಭಟನೆಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚಿಸಿದ್ದಾರೆ. ಪ್ರತಿಭಟನೆ ಅಂತ್ಯಗೊಳಿಸುವ ಸಂಭವನೀಯ ಪರ್ಯಾಯ ಆಯ್ಕೆಯ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾತುಕತೆಗೆ ರೈತ ಮುಖಂಡರು ಸಿದ್ಧರಿರುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಜಗಮೋಹನ್ ಸಿಂಗ್ ತಿಳಿಸಿದ್ದಾರೆ. ಒಂದು ವೇಳೆ ಸರ್ಕಾರ ಕರೆದರೆ ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ. ಆದರೆ, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು, ಇದು ಜನಾಂದೋಲನವಾಗಿ ರೂಪುಗೊಳ್ಳುತ್ತಿದೆ. ಬರೀ ಕೈಯಲ್ಲಿ ನಮ್ಮ ಊರಿಗೆ ಮರಳುವುದಿಲ್ಲ ಎಂದಿದ್ದಾರೆ.
ಈ ಮಧ್ಯೆ ನೂತನ ಕೃಷಿ ಕಾನೂನುಗಳಿಗೆ ಸರ್ಕಾರದ ತಿದ್ದುಪಡಿ ಪ್ರಸ್ತಾವನೆಯನ್ನು ರೈತ ಮುಖಂಡರು ತಿರಸ್ಕರಿಸಿದ್ದು, ಜೈಪುರ-ದೆಹಲಿ ಮತ್ತು ದೆಹಲಿ- ಅಗ್ರಾ ನಡುವಣ ಎಕ್ಸ್ ಪ್ರೆಸ್ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆಯನ್ನು ತೀವ್ರಗೊಳಿಸುವುದು, ಡಿಸೆಂಬರ್ 14 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಬುಧವಾರ ನಿಗದಿಯಾಗಿದ್ದ ರೈತ ಮುಖಂಡರ ಜೊತೆಗಿನ ಸರ್ಕಾರದ ಆರನೇ ಸುತ್ತಿನ ಮಾತುಕತೆ ರದ್ದುಗೊಂಡಿದ್ದು, ದೆಹಲಿ ಚಲೋ ಪ್ರತಿಭಟನೆಗೆ ರೈತ ಮುಖಂಡರು ಕರೆ ನೀಡಿದ್ದಾರೆ. ನೂತನ ಕೃಷಿ ಕಾನೂನುಗಳು ರದ್ದಾಗದಿದ್ದಲ್ಲಿ ದೆಹಲಿಯನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗುವುದು ಎಂದು ರೈತರೊಬ್ಬರು ತಿಳಿಸಿದ್ದಾರೆ.
Advertisement