ರೈತ ಸಂಘಟನೆಗಳು ಸರ್ಕಾರದ ಪ್ರಸ್ತಾವನೆ ಪರಿಗಣಿಸಬೇಕು, ಮುಂದಿನ ಮಾತುಕತೆಗೂ ಸಿದ್ಧ: ಕೇಂದ್ರ ಕೃಷಿ ಸಚಿವ
ನವದೆಹಲಿ: ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಕೇಂದ್ರ ಸರ್ಕಾರದ ಪ್ರಸ್ತಾಪಗಳನ್ನು ಪರಿಗಣಿಸಬೇಕು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಗುರುವಾರ ರೈತ ಮುಖಂಡರಿಗೆ ಮನವಿ ಮಾಡಿದ್ದಾರೆ.
ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೋಮರ್ ಅವರು, ಸರ್ಕಾರ ಯಾವುದೇ ಸಮಯದಲ್ಲೂ ರೈತರೊಂದಿಗೆ ಹೆಚ್ಚಿನ ಚರ್ಚೆಗೆ ಸಿದ್ಧವಾಗಿದೆ ಎಂದು ಹೇಳಿದರು.
ಕೃಷಿ ಕಾನೂನು ತಿದ್ದುಪಡಿ ಕುರಿತು ಕೇಂದ್ರ ಸರ್ಕಾರ ನೀಡಿದ ಕರಡು ಪ್ರಸ್ತಾವನೆಯನ್ನು ರೈತ ಸಂಘಟನೆಗಳು ತಿರಸ್ಕರಿಸಿದ ಒಂದು ದಿನದ ನಂತರ, ಕನಿಷ್ಠ ಬೆಂಬಲ ಬೆಲೆ ಬಗ್ಗೆ ಮತ್ತು ಸೆಪ್ಟೆಂಬರ್‌ನಲ್ಲಿ ಜಾರಿಗೆ ತಂದ ಹೊಸ ಕೃಷಿ ಕಾನೂನುಗಳಲ್ಲಿನ ಕೆಲವು ನಿಬಂಧನೆಗಳಿಗೆ ತಿದ್ದುಪಡಿ ತರುವ ಬಗ್ಗೆ ರೈತರಿಗೆ ಲಿಖಿತ ಭರವಸೆ ನೀಡಲಾಗಿದೆ ಎಂದರು.
ಮಾತುಕತೆ ನಡೆಯುತ್ತಿರುವಾಗ ಮುಂದಿನ ಹಂತದ ಪ್ರತಿಭಟನೆ ಘೋಷಿಸುವುದು ಸರಿಯಲ್ಲ. ರೈತರು ಕೃಷಿ ಕಾನೂನುಗಳ ಕುರಿತು ಚರ್ಚೆಗೆ ಮರಳುವಂತೆ ಸಚಿವರು ಒತ್ತಾಯಿಸಿದರು.
"ನಾವು ಪ್ರತಿಭಟನಾನಿರತ ರೈತರೊಂದಿಗೆ ಚರ್ಚಿಸಿದ ನಂತರವೇ ಪ್ರಸ್ತಾವನೆ ನೀಡಿದ್ದೇವೆ. ಆದ್ದರಿಂದ ಅದನ್ನು ರೈತ ಸಂಘಟನೆಗಳು ಪರಿಗಣಿಸಬೇಕು. ಈ ಪ್ರಸ್ತಾವನೆ ಬಗ್ಗೆ ಮತ್ತಷ್ಟು ಚರ್ಚಿಸಲು ಬಯಸಿದರೆ, ಅದಕ್ಕೂ ನಾವು ಸಿದ್ಧರಿದ್ದೇವೆ" ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ