ಮುಂಬೈ: ಜೀನ್ಸ್ ಮತ್ತುಟಿ ಶರ್ಟ್ ಕೆಲವರ ಪಾಲಿಗೆ ಒತ್ತಡ ಕಡಿಮೆ ಮಾಡುತ್ತದೆ. ಆದರೆ ಇನ್ನು ಮುಂದೆ ಮಹಾರಾಷ್ಟ್ರದ ಸರ್ಕಾರಿ ಉದ್ಯೋಗಿಗಳು ಇಂತಹಾ ಒತ್ತಡರಹಿತ ಉಡುಪು ಧರಿಸಿ ಕಚೇರಿಗೆ ಬರುವಂತಿಲ್ಲ. ಮಾತ್ರವಲ್ಲ ಕಾಲುಗಳಿಗೆ ಗಾಳಿಯಾಡಬಲ್ಲ ಲೈಟ್ ವೈಟ್ ಚಪ್ಪಲಿ ಧರಿಸುವಂತಿಲ್ಲ.
ಹೌದು ಮಹಾರಾಷ್ಟ್ರ ಸರ್ಕಾರ ಸರ್ಕಾರಿ ನೌಕರರಿಗೆ ನೂತನ ಡ್ರೆಸ್ ಕೋಡ್ ಜಾರಿ ಮಾಡಿದೆ. ಅದರಂತೆ ಸರ್ಕಾರಿ ನೌಕರರು ಕೈಮಗ್ಗದ ಬಟ್ಟೆಯನ್ನು ಉತ್ತೇಜಿಸುವ ಸಲುವಾಗಿ ಶುಕ್ರವಾರ ಒಂದು ದಿನದ ಮಟ್ಟಿಗಾದರೂ ಖಾದಿ ಬಟ್ಟೆಗಳನ್ನು ಧರಿಸಬೇಕು ಎಂದು ಆದೇಶಿಸಿದೆ. ಈ ಕುರಿತಂತೆ ಸರ್ಕಾರ ಡಿಸೆಂಬರ್ 8 ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ತಿಳಿಸಿದೆ.
"ಹಲವಾರು ಅಧಿಕಾರಿಗಳು / ಸಿಬ್ಬಂದಿ (ಮುಖ್ಯವಾಗಿ ಗುತ್ತಿಗೆ ಸಿಬ್ಬಂದಿ ಮತ್ತು ಸರ್ಕಾರಿ ಕೆಲಸದಲ್ಲಿ ತೊಡಗಿರುವ ನೌಕರರು ) ಸರ್ಕಾರಿ ನೌಕರಿಗೆ ಸೂಕ್ತವಾದ ಉಡುಪನ್ನು ಧರಿಸುವುದಿಲ್ಲ ಎಂದು ಗಮನಿಸಿದ್ದೇವೆ. ಆದ್ದರಿಂದ, ಸರ್ಕಾರಿ ನೌಕರರ ಬಗೆಗಿನ ಜನರ ಭಾವನೆ ಕಳಪೆ ಮಟ್ಟದಲ್ಲಿದೆ. ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯೋಗಿಗಳಿಂದ ಜನರು "ಉತ್ತಮ ನಡವಳಿಕೆ ಮತ್ತು ವ್ಯಕ್ತಿತ್ವ" ವನ್ನು ನಿರೀಕ್ಷಿಸುತ್ತಾರೆ. ಅದಕ್ಕಾಗಿ "ಅಧಿಕಾರಿಗಳು ಮತ್ತು ನೌಕರರ ಉಡುಪು ಅದಕ್ಕೆ ಸೂಕ್ತ ರೀತಿಯಲ್ಲಿರಬೇಕು. ಉಡುಪು ಸಾಮಾನ್ಯ ಗೌರವಯುತವಾಗಿಲ್ಲದೆ ಹೋದಲ್ಲಿ ಅದು ಅವರ ಕೆಲಸದ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ" ಎಂದು ಸುತ್ತೋಲೆ ತಿಳಿಸಿದೆ.
ಸರ್ಕಾರಿ ಉದ್ಯೋಗಿಗಳ ಉಡುಪು ಸರಿಯಾಗಿಯೂ, ಸ್ವಚ್ಚವಾಗಿಯೂ ಇರಬೇಕು. ಮಹಿಳಾ ಉದ್ಯೋಗಿಗಳು ಸೀರೆ, ಸಲ್ವಾರ್, ಚೂಡಿದಾರ್, ಕುರ್ತಾ, ಪ್ಯಾಂಟ್ ಮತ್ತು ಶರ್ಟ್ ಜೊತೆಗೆ ದುಪಟ್ಟಾಗಳನ್ನು ಧರಿಸಬಹುದು. ಪುರುಷ ಉದ್ಯೋಗಿಗಳು ಶರ್ಟ್ ಮತ್ತು "ಪ್ಯಾಂಟ್ ಧರಿಸಬೇಕು.
"ತೀಕ್ಷ್ಣವಾದ ಬಣ್ಣಗಳು, ವಿಚಿತ್ರವಾದ ಕಸೂತಿ ಮಾದರಿಗಳು ಅಥವಾ ಚಿತ್ರಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸಬಾರದು. ಅಲ್ಲದೆ, ನೌಕರರು ಮತ್ತು ಸಿಬ್ಬಂದಿ ಕಚೇರಿಗಳಲ್ಲಿ ಜೀನ್ಸ್ ಮತ್ತು ಟಿ ಶರ್ಟ್ ಧರಿಸಬಾರದು" ಎಂದು ಸುತ್ತೋಲೆ ಆದೇಶಿಸಿದೆ. ಅಲ್ಲದೆ ಮಹಿಳಾ ಉದ್ಯೋಗಿಗಳು ಚಪ್ಪಲ್, ಸ್ಯಾಂಡಲ್ ಅಥವಾ ಬೂಟುಗಳನ್ನು ಧರಿಸಬೇಕು ಮತ್ತು ಪುರುಷರು ಶೂ ಅಥವಾ ಸ್ಯಾಂಡಲ್ ಧರಿಸಬೇಕು ಎಂದು ಹೇಳಲಾಗಿದೆ.
Advertisement