ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಕೃಷಿ ಮಸೂದೆಯ ಸುಧಾರಣೆಗಳಿಂದ ರೈತರಿಗೆ ಹೊಸ ಮಾರುಕಟ್ಟೆ, ಆಯ್ಕೆಗಳು ಮತ್ತು ತಂತ್ರಜ್ಞಾನದ ಪ್ರಯೋಜನ: ಪ್ರಧಾನಿ ಮೋದಿ

2020ನೇ ವರ್ಷ ಹಲವರ ಕನಸನ್ನು ನುಚ್ಚುನೂರು ಮಾಡಿತು, ಜೀವನದಲ್ಲಿ ಸಾಕಷ್ಟು ಸಂಕಷ್ಟವನ್ನು ತಂದೊಡ್ಡಿತು. ನಮ್ಮ ದೇಶ ಸೇರಿದಂತೆ ಇಡೀ ವಿಶ್ವ ಸಾಕಷ್ಟು ಏರಿಳಿತಗಳನ್ನು ಕಂಡಿತು.
Published on

ನವದೆಹಲಿ: ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಹಲವು ವಿಷಯಗಳು ವೇಗವಾಗಿ ಬದಲಾಗುತ್ತಿರುತ್ತದೆ. ಆದರೆ 2020ನೇ ವರ್ಷ ಹಲವರ ಕನಸನ್ನು ನುಚ್ಚುನೂರು ಮಾಡಿತು, ಜೀವನದಲ್ಲಿ ಸಾಕಷ್ಟು ಸಂಕಷ್ಟವನ್ನು ತಂದೊಡ್ಡಿತು. ನಮ್ಮ ದೇಶ ಸೇರಿದಂತೆ ಇಡೀ ವಿಶ್ವ ಸಾಕಷ್ಟು ಏರಿಳಿತಗಳನ್ನು ಕಂಡಿತು. ಇನ್ನು ಕೆಲ ವರ್ಷಗಳು ಕಳೆದ ನಂತರ ಕೊರೋನಾ ಬಗ್ಗೆ ಯೋಚಿಸಿದರೆ ನಾವು ನಂಬಲೂ ಸಾಧ್ಯವಿಲ್ಲ. ಪರಿಸ್ಥಿತಿ ಇದೀಗ ಸುಧಾರಿಸುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ದೆಹಲಿಯಲ್ಲಿ ವರ್ಚುವಲ್ ಕಾನ್ಫರೆನ್ಸ್ ಮೂಲಕ ಎಫ್ ಐಸಿಸಿಐ 93ನೇ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಕೊರೋನಾ ಕಾಲಿಟ್ಟಾಗ ನಾವು ಕಣ್ಣಿಗೆ ಕಾಣದ ಶತ್ರುವಿನ ವಿರುದ್ಧ ಹೋರಾಡುವ ಪರಿಸ್ಥಿತಿ ಬಂತು. ನಮ್ಮ ಜೀವನದಲ್ಲಿ ಸಾಕಷ್ಟು ಅನಿಶ್ಚಿತತೆ ಎದುರಾಯಿತು. ಅದು ಉತ್ಪಾದನೆ, ಲಾಜಿಸ್ಟಿಕ್ಸ್, ಆರ್ಥಿಕತೆಯ ಪುನರುಜ್ಜೀವನ, ದಿನನಿತ್ಯದ ಜೀವನ ಹೀಗೆ ಅನೇಕ ವಿಷಯಗಳಾಗಿರಬಹುದು. ಇದು ಎಷ್ಟು ದಿನ ಮುಂದುವರಿಯಬಹುದು, ಹೇಗೆ ಮೊದಲಿನ ಸ್ಥಿತಿಗೆ ಬರಬಹುದು, ನಾವು ಮೊದಲಿನಂತೆ ಜೀವನ ಮಾಡುವುದು ಯಾವಾಗ ಎಂದು ಅನಿಸಲಾರಂಭಿಸಿತು ಎಂದು ಮೋದಿ ಕೊರೋನಾ ಆರಂಭದ ದಿನಗಳ್ನು ನೆನಪು ಮಾಡಿಕೊಂಡರು.

ಡಿಸೆಂಬರ್ ಹೊತ್ತಿಗೆ ಪರಿಸ್ಥಿತಿ ಬದಲಾಯಿತು. ನಮ್ಮಲ್ಲಿ ಈಗ ಪ್ರಶ್ನೆಗೆ ಉತ್ತರವಿದೆ, ಮುಂದೆ ಮಾಡಬೇಕಾದ ಕೆಲಸಕ್ಕೆ ನೀಲನಕ್ಷೆಯಿದೆ. ಇಂದು ಆರ್ಥಿಕತೆಯ ಸೂಚ್ಯಂಕ ಆಶಾದಾಯಕವಾಗಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಕಲಿತ ಪಾಠಗಳು ಭವಿಷ್ಯದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳಿಗೆ ಇನ್ನಷ್ಟು ಶಕ್ತಿ ನೀಡುತ್ತದೆ ಎಂಬ ನಂಬಿಕೆ ಉಂಟಾಗಿದೆ ಎಂದು ಹೇಳಿದರು.

ಕಳೆದ 6 ವರ್ಷಗಳಲ್ಲಿ ಜಗತ್ತಿನ ಬೇರೆ ರಾಷ್ಟ್ರಗಳು ಭಾರತದ ಮೇಲಿಟ್ಟಿರುವ ನಂಬಿಕೆ ಕಳೆದ ಕೆಲ ತಿಂಗಳುಗಳಲ್ಲಿ ಹೆಚ್ಚಾಗಿದೆ.ಅದು ವಿದೇಶಿ ನೇರ ಹೂಡಿಕೆ(ಎಫ್ ಡಿಐ)ಯಲ್ಲಾಗಿರಬಹುದು ಅಥವಾ ವಿದೇಶಿ ಬಂಡವಾಳ ಹೂಡಿಕೆ(ಎಫ್ ಪಿಐ)ಯಲ್ಲಾಗಿರಬಹುದು, ವಿದೇಶಿ ಹೂಡಿಕೆದಾರರು ದಾಖಲೆಯ ಹೂಡಿಕೆಗಳನ್ನು ಭಾರತದಲ್ಲಿ ಮಾಡಿದ್ದು ಅದನ್ನು ಮುಂದುವರಿಸುತ್ತಿದ್ದಾರೆ ಎಂದರು.

ಈ ಹಿಂದಿನ ಸರ್ಕಾರದ ನೀತಿಗಳಿಂದಾಗಿ ಹಲವು ವಲಯಗಳಲ್ಲಿ ಅದಕ್ಷತೆ ಕಂಡುಬಂದಿತ್ತು. ಹೊಸ ಪ್ರಯೋಗಗಳಿಗೆ ಕೂಡ ತಡೆಯನ್ನೊಡ್ಡುತ್ತಿತ್ತು. ಆತ್ಮನಿರ್ಭರ್ ಭಾರತ್ ಅಭಿಯಾನ ಪ್ರತಿ ವಲಯದಲ್ಲಿ ದಕ್ಷತೆಯನ್ನು ಹೆಚ್ಚಿಸುತ್ತದೆ. ಭಾರತವು ದೀರ್ಘಕಾಲೀನ ಸ್ಪರ್ಧಾತ್ಮಕ ಪ್ರಯೋಜನವನ್ನು ಹೊಂದಿರುವ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳನ್ನು ಪುನಃ ಶಕ್ತಿಯುತಗೊಳಿಸಲು ಒತ್ತು ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ನೂತನ ಕೃಷಿ ಮಸೂದೆ: ಇಂದಿನ ಭಾಷಣದಲ್ಲಿ ಕೂಡ ಪ್ರಧಾನಿ ನೂತನ ಕೃಷಿ ಮಸೂದೆ ಬಗ್ಗೆ ಪ್ರಸ್ತಾಪಿಸಿ ಪರೋಕ್ಷವಾಗಿ ಪ್ರತಿಭಚನೆ ನಡೆಸುತ್ತಿರುವ ರೈತರಿಗೆ ಸಲಹೆ ನೀಡಿದರು. ಕೃಷಿ ವಲಯ ಮತ್ತು ಅದಕ್ಕೆ ಸಂಬಂಧಪಟ್ಟ ಇತರ ವಲಯಗಳ ಮಧ್ಯೆ ತಡೆಗೋಡೆಗಳನ್ನು ನಾವು ಕಾಣುತ್ತಿದ್ದೆವು. ಅದು ಕೃಷಿ ಮೂಲ ಸೌಕರ್ಯ, ಆಹಾರ ಸಂಸ್ಕರಣೆ, ಕೃಷಿ ಉತ್ಪನ್ನಗಳ ಸಂಗ್ರಹ ಮತ್ತು ಶೈತ್ಯಾಗಾರ ವಿಷಯಗಳಲ್ಲಿ ಆಗಿರಬಹುದು. ಎಲ್ಲಾ ಅಡೆತಡೆಗಳನ್ನು ನೂತನ ಸುಧಾರಿತ ಕೃಷಿ ಮಸೂದೆ ತೆಗೆದುಹಾಕುತ್ತದೆ. ನೂತನ ಕೃಷಿ ಮಸೂದೆಯಿಂದ ರೈತರು ಹೊಸ ಮಾರುಕಟ್ಟೆ, ಆಯ್ಕೆಗಳು ಮತ್ತು ತಂತ್ರಜ್ಞಾನದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದರು.

ಶೈತ್ಯಾಗಾರ ಸಂಗ್ರಹ ಸೌಕರ್ಯವನ್ನು ಆಧುನೀಕರಣಗೊಳಿಸಲಾಗುತ್ತದೆ. ಇದರಿಂದ ಕೃಷಿ ವಲಯದಲ್ಲಿ ಹೆಚ್ಚಿನ ಹೂಡಿಕೆಯಾಗಲಿದೆ. ಇದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ, ಅವರ ಆದಾಯ ಹೆಚ್ಚಾಗಲಿದೆ ಎಂದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com