ಗಾಜಿಯಾಬಾದ್: ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ ಎರಡು ವಾರಗಳಿಂದ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಗುಂಪನ್ನು ಅನ್ನದಾತರು ವಾಪಸ್ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯರು ಸೇರಿದಂತೆ ಆರು ವಿದ್ಯಾರ್ಥಿಗಳ ಗುಂಪು 'ದಫ್ಲಿ'(ತಂಬೂರಿ) ಹಾಡುತ್ತಾ ಮತ್ತು ನುಡಿಸುವ ಮೂಲಕ ರೈತರಿಗೆ ಬೆಂಬಲ ನೀಡಲು ಬಂದಿದ್ದರು. ಆದರೆ ರೈತರ ವಿದ್ಯಾರ್ಥಿಗಳ ಬೆಂಬಲವನ್ನು ತಿರಸ್ಕರಿಸಿದ್ದು, ಪೊಲೀಸರು ಅವರನ್ನು ವಾಪಸ್ ಕಳುಹಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ರೈತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದಾಗ, ಪೊಲೀಸರು ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಿದ್ದಾರೆ ಎಂದು ಡಿಎಸ್ಪಿ ಅನ್ಶು ಜೈನ್ ಪಿಟಿಐಗೆ ತಿಳಿಸಿದ್ದಾರೆ.
ಈ ಮಧ್ಯೆ, ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕೈಟ್ ಅವರು "ರೈತರ ಐಕ್ಯತೆಯನ್ನು ಮುರಿಯಲು ಸರ್ಕಾರ ಬಯಸಿದೆ" ಎಂದು ಆರೋಪಿಸಿದ್ದಾರೆ.
ರೈತರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದ್ದು, ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಆಂದೋಲನ "ಐತಿಹಾಸಿಕ" ಹೋರಾಟ ಎಂದು ಅವರು ಹೇಳಿದ್ದಾರೆ.
ರೈತರು ಸೋಮವಾರ ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಬಿಕೆಯು ಮುಖಂಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ರೈತರಿಗಾಗಿ "ಕಿಸಾನ್ ಆಯೋಗ್"(ರೈತ ಆಯೋಗ) ರಚಿಸಬೇಕು ಮತ್ತು ಅದಕ್ಕೆ ರೈತರನ್ನು ಪ್ರತಿನಿಧಿಗಳನ್ನಾಗಿ ಮಾಡಬೇಕು. ಈ ಆಯೋಗ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುತ್ತದೆ" ಎಂದು ಬಿಕೆಯು ಮುಖ್ಯಸ್ಥ ಠಾಕೂರ್ ಭಾನು ಪ್ರತಾಪ್ ಸಿಂಗ್ ಅವರು ಹೇಳಿದ್ದಾರೆ. ಅಲ್ಲದೆ 60 ವರ್ಷ ಮೇಲ್ಪಟ್ಟ ರೈತರಿಗೆ ತಿಂಗಳಿಗೆ 10 ಸಾವಿರ ರೂಪಾಯಿ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
Advertisement