ತೆಂಗಿನ ಕಾಯಿ ಕೀಳಲು 55 ಅಡಿ ಎತ್ತರದ ಮರ ಹತ್ತಿ ನಿದ್ದೆ ಹೋದ ವ್ಯಕ್ತಿ: ಕೆಳಗಿಳಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ!

55 ಅಡಿ ಎತ್ತರದ ತೆಂಗಿನ ಮರದಲ್ಲಿ ವ್ಯಕ್ತಿಯೊಬ್ಬರು ನಿದ್ದೆಗೆ ಜಾರಿದ ಪ್ರಸಂಗ ನಡೆದಿದೆ. ವ್ಯಕ್ತಿ ನಿದ್ದೆ ಮಾಡುತ್ತಿರುವುದನ್ನು ನೋಡಿದ ಜನರು ಎಲ್ಲಿ ಬಿದ್ದುಬಿಡುತ್ತಾರೋ ಎಂಬ ಭಯದಿಂದ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಿ ಅವರು ಬಂದು ಮರದಿಂದ ಇಳಿಸಿದ ಘಟನೆ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಂಜಾವೂರು: 55 ಅಡಿ ಎತ್ತರದ ತೆಂಗಿನ ಮರದಲ್ಲಿ ವ್ಯಕ್ತಿಯೊಬ್ಬರು ನಿದ್ದೆಗೆ ಜಾರಿದ ಪ್ರಸಂಗ ನಡೆದಿದೆ. ವ್ಯಕ್ತಿ ನಿದ್ದೆ ಮಾಡುತ್ತಿರುವುದನ್ನು ನೋಡಿದ ಜನರು ಎಲ್ಲಿ ಬಿದ್ದುಬಿಡುತ್ತಾರೋ ಎಂಬ ಭಯದಿಂದ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಿ ಅವರು ಬಂದು ಮರದಿಂದ ಇಳಿಸಿದ ಘಟನೆ ನಡೆದಿದೆ. 

ಕರಂತೈಯ ಸರುಕ್ಕೈ ವೇಲೂರಿನ ತೆಂಗಿನ ಕಾಯಿ ತೆಗೆಯುವ ಕಾರ್ಮಿಕ ಎಂ ಲೋಕನಾಥನ್ ತೆಂಗಿನ ಮರದ ತುದಿಯಲ್ಲಿ ನಿದ್ದೆ ಹೋದ ವ್ಯಕ್ತಿಯಾಗಿದ್ದು ತೆಂಗಿನ ಕಾಯಿ ಕೀಳಲು ಮರ ಹತ್ತಿದ್ದರು. ಮರ ಹತ್ತಿ ತೆಂಗಿನ ಕಾಯಿ ಕಿತ್ತ ಮೇಲೆ ಸುಸ್ತಾಗಿ ಅಲ್ಲಿಯೇ ನಿದ್ದೆ ಹೋಗಿದ್ದರು. 

ವ್ಯಕ್ತಿ ನಿದ್ದೆ ಮಾಡುತ್ತಿದ್ದರಿಂದ ಭೀತಿಗೊಂಡ ಗ್ರಾಮಸ್ಥರು ಎಲ್ಲಿ ಬಿದ್ದುಬಿಡುತ್ತಾರೆಯೋ ಎಂದು ಭಯದಿಂದ ಕೂಗಿ ಶಬ್ದ ಮಾಡಿ ನಿದ್ದೆಯಿಂದ ಎಚ್ಚರಿಸಲು ನೋಡಿದರು. ಊಹುಂ...ಜಪ್ಪಯ್ಯ ಎಂದರೂ ಲೋಕನಾಥನ್ ಎಚ್ಚರಗೊಳ್ಳಲಿಲ್ಲ. ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ಮತ್ತು ತಂಜಾವೂರು ಪಶ್ಚಿಮ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು.

ಅಗ್ನಿಶಾಮಕ ಸಿಬ್ಬಂದಿ ಮರಕ್ಕೆ ಸ್ಟೀಲ್ ನ ಏಣಿ ಇಟ್ಟು ಹತ್ತಿ ವ್ಯಕ್ತಿಯನ್ನು ನಿದ್ದೆಯಿಂದ ಎಬ್ಬಿಸಿದರು. ನಿದ್ದೆಯಿಂದ ಎಚ್ಚರಗೊಂಡ ಲೋಕನಾಥನ್ ಏಣಿಯ ಸಹಾಯದಿಂದ ಇಳಿಯಲು ಇಚ್ಚಿಸದೆ ತಾನಾಗಿಯೇ ಮರದಿಂದ ಇಳಿಯುತ್ತೇನೆ ಎಂದು ಹಠ ಹಿಡಿದರು. ಅಸಹಜ ಸ್ಥಿತಿಯಲ್ಲಿದ್ದ ಲೋಕನಾಥನ್ ತಾನು ಮರ ಹತ್ತಿದ ಮೇಲೆ ತೀರಾ ಸುಸ್ತಾಗಿ ಆಯಾಸದಿಂದ ನಿದ್ದೆ ಹೋದೆ ಎನ್ನುತ್ತಾರೆ. 
ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು ಇನ್ನೆಂದೂ ಹೀಗೆ ಮಾಡದಂತೆ ತೆಂಗಿನ ಮರ ಹತ್ತುವಾಗ ಎಚ್ಚರಿಕೆಯಿಂದ ಇರುವಂತೆ ಬುದ್ದಿ ಹೇಳಿ ಕಳುಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com