ಕೇಂದ್ರದ ನೂತನ ಕೃಷಿ ಮಸೂದೆಗೆ ಮತ್ತೊಂದು ಸಂಘಟನೆ ಬೆಂಬಲ: ಭಾರತೀಯ ಕಿಸಾನ್ ಸಂಘದ ಮತ್ತೊಂದು ಬಣ ನೊಯ್ಡಾಗೆ ಆಗಮನ

ನೂತನ ಕೃಷಿ ಮಸೂದೆ ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ತೀವ್ರ ಸ್ವರೂಪದ ಪ್ರತಿಭಟನೆ ಮಧ್ಯೆ, ಎಫ್ಐಎಫ್ಎ ಎಂಬ ಮತ್ತೊಂದು ರೈತ ಸಂಘಟನೆ ನಿನ್ನೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ಅವರನ್ನು ಭೇಟಿ ಮಾಡಿ ಕೃಷಿ ಮಸೂದೆಗೆ ಬೆಂಬಲ ನೀಡಿದೆ.
ನಿನ್ನೆ ಸಿಂಘು ಗಡಿಭಾಗದಲ್ಲಿ ರೈತರ ಪ್ರತಿಭಟನೆ
ನಿನ್ನೆ ಸಿಂಘು ಗಡಿಭಾಗದಲ್ಲಿ ರೈತರ ಪ್ರತಿಭಟನೆ

ನವದೆಹಲಿ: ನೂತನ ಕೃಷಿ ಮಸೂದೆ ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ತೀವ್ರ ಸ್ವರೂಪದ ಪ್ರತಿಭಟನೆ ಮಧ್ಯೆ, ಎಫ್ಐಎಫ್ಎ ಎಂಬ ಮತ್ತೊಂದು ರೈತ ಸಂಘಟನೆ ನಿನ್ನೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ಅವರನ್ನು ಭೇಟಿ ಮಾಡಿ ಕೃಷಿ ಮಸೂದೆಗೆ ಬೆಂಬಲ ನೀಡಿದೆ.

ದ ಫೆಡರೇಶನ್ ಆಫ್ ಇಂಡಿಯನ್ ಎಫ್ ಪಿಒ ಮತ್ತು ಅಗ್ರೆಗೇಟರ್ಸ್(ಎಫ್ಐಎಫ್ಎ) ರೈತ ಸಮುದಾಯದ ಆರನೇ ಸಂಘಟನೆಯಾಗಿದ್ದು ಕಳೆದ ಎರಡು ವಾರಗಳಲ್ಲಿ ಕೇಂದ್ರ ಸರ್ಕಾರಕ್ಕೆ ಮಸೂದೆ ಪರವಾಗಿ ಬೆಂಬಲ ಸೂಚಿಸಿದ ಆರನೇ ಸಂಘಟನೆಯಾಗಿದೆ. ಈ ಹಿಂದೆ ಹರ್ಯಾಣ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳ ರೈತ ಸಮುದಾಯಗಳು ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದವು.

ಎಫ್ಐಎಫ್ಎ 15 ರಾಜ್ಯಗಳನ್ನು ಪ್ರತಿನಿಧಿಸುತ್ತಿದ್ದು ಸುಮಾರು 500 ಮಂದಿ ರೈತ ಉತ್ಪಾದಕರ ಸಂಘಟನೆಗಳನ್ನು ದೇಶದಲ್ಲಿ ಹೊಂದಿದೆ. ಕೇಂದ್ರ ಸರ್ಕಾರದ ಇತ್ತೀಚಿನ ಕೃಷಿ ಸುಧಾರಣಾ ಮಸೂದೆಗಳನ್ನು ಎಫ್ಐಎಫ್ಎ ಬೆಂಬಲಿಸಿದ್ದು, ರೈತ ಉತ್ಪನ್ನಗಳ ಸಂಘಟನೆಗಳ ಸಣ್ಣ ಮಟ್ಟದ ಉದ್ಯಮಕ್ಕೆ ಸಹಾಯ ಮಾಡುವ ಮೂಲಕ ಸಣ್ಣ ಮತ್ತು ಮಧ್ಯಮ ಗಾತ್ರದ ರೈತರಿಗೆ ಸಹಾಯ ಮಾಡುತ್ತಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇತ್ತೀಚಿನ ಸುಧಾರಿತ ಕೃಷಿ ಮಸೂದೆಯಿಂದ ಸಣ್ಣ ರೈತರಿಗೆ ಸಾಕಷ್ಟು ಸಹಾಯವಾಗಲಿದೆ ಎಂಬುದು ಈ ಸಂಘಟನೆ ಸದಸ್ಯರ ಅಭಿಮತವಾಗಿದೆ.

ಈ ಮಧ್ಯೆ ರೈತ ಸಂಘಟನೆಯ ಮತ್ತೊಂದು ಗುಂಪು ನೊಯ್ಡಾಗೆ ತಲುಪಿದ್ದು ದೆಹಲಿಯಲ್ಲಿ ನಡೆಯುತ್ತಿರುವ ಕೃಷಿ ಮಸೂದೆ ವಿರೋಧಿ ಪ್ರತಿಭಟನೆಯಲ್ಲಿ ಒಂದಾಗಲು ನೋಡುತ್ತಿದ್ದಾರೆ. ಆದರೆ ಚಿಲ್ಲ ಗಡಿಭಾಗದಲ್ಲಿ ಅವರನ್ನು ಪೊಲೀಸರು ತಡೆದರು. ಭಾರತೀಯ ಕಿಸಾನ್ ಸಂಘಟನೆ(ಅಂಬವಟ್) ಬಣದ ಹಲವು ಸದಸ್ಯರನ್ನು ನೊಯ್ಡಾ-ದೆಹಲಿ ಸಂಪರ್ಕ ರಸ್ತೆಯ ಮಹಾಮಾಯ ಫ್ಲೈ ಓವರ್ ನಲ್ಲಿ ಪೊಲೀಸರು ನಿನ್ನೆ ತಡೆದರು. ಇದರಿಂದ ತೀವ್ರ ಸಂಚಾರ ದಟ್ಟಣೆಯುಂಟಾಯಿತು.

ಚಿಲ್ಲ ಮೂಲಕ ನೋಯ್ಡಾ-ದೆಹಲಿ ಸಂಪರ್ಕ ರಸ್ತೆಯನ್ನು ಭಾಗಶಃ ಮುಚ್ಚಲಾಗಿದೆ. ದೆಹಲಿಯಿಂದ ನೋಯ್ಡಾಕ್ಕೆ ಚಲಿಸಲು ಅನುಮತಿ ಇದೆ ಆದರೆ ಹಿಂತಿರುಗಲು ರೈತರ ಪ್ರತಿಭಟನೆಯಿಂದಾಗಿ ಸಾಧ್ಯವಾಗುತ್ತಿಲ್ಲ ಎಂದು ನೊಯ್ಡಾ ಸಂಚಾರಿ ಪೊಲೀಸ್ ಅಧಿಕಾರಿಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com