

ಕೋಲ್ಕತ್ತ: ಪಕ್ಷ ತೊರೆದಿದ್ದ ತೃಣಮೂಲ ಕಾಂಗ್ರೆಸ್ ನ ಶಾಸಕ ಜಿತೇಂದ್ರ ತಿವಾರಿಗೆ ಬಿಜೆಪಿಯಲ್ಲಿ ನೋ ಎಂಟ್ರಿ ಬೋರ್ಡ್ ಎದುರಾಗಿದ್ದು, ಈಗ ಹಳೆಯ ಪಕ್ಷವೇ ಗತಿ ಎಂದು ಮಮತಾ ಬ್ಯಾನರ್ಜಿ ಬಳಿ ಓಡಿದ್ದಾರೆ.
ಪಕ್ಷ ತೊರೆದ ಒಂದೇ ದಿನಕ್ಕೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡುವುದಕ್ಕೆ ಜಿತೇಂದ್ರ ತಿವಾರಿ ಮುಂದಾಗಿದ್ದಾರೆ.
ಟಿಎಂಸಿಯ ಹಿರಿಯ, ಪ್ರಭಾವಿ ನಾಯಕ ಸುವೇಂದು ಅಧಿಕಾರಿ ಪಕ್ಷ ತೊರೆದ ಬೆನ್ನಲ್ಲೇ ಜಿತೇಂದ್ರ ತಿವಾರಿ ಸಹ ಪಕ್ಷ ತೊರೆದಿದ್ದರು. ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳು ಗಟ್ಟಿಯಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸಚಿವ ಬಾಬೂಲ್ ಸುಪ್ರಿಯೋ, ಜಿತೇಂದ್ರ ತಿವಾರಿಗೆ ಸಂಬಂಧಿಸಿದಂತೆ ಹೈಕಮಾಂಡ್ ಏನು ಬೇಕಾದರೂ ತೀರ್ಮಾನ ಮಾಡಲಿ, ಪಶ್ಚಿಮ ಬಂಗಾಳದಲ್ಲಿ ನಮ್ಮ ಬಿಜೆಪಿ ಕಾರ್ಯಕರ್ತರನ್ನು ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡಿದ ವ್ಯಕ್ತಿಯನ್ನು ಬಿಜೆಪಿಯಲ್ಲಿ ಸ್ವಾಗತಿಸುವ ಪ್ರಶ್ನೆಯೇ ಇಲ್ಲ, ಇದಕ್ಕೆ ಅವಕಾಶ ಸಿಗದಂತೆ ನಾನು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಬಾಬೂಲ್ ಸುಪ್ರಿಯೋ ಹೇಳಿದ್ದಾರೆ.
ಅಸಾನ್ಸೋಲ್ ಕ್ಷೇತ್ರದ ಟಿಎಂಸಿ ನಾಯಕರೊಂದಿಗೆ ಸುಪ್ರಿಯೋ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪಗಳನ್ನು ಸುಪ್ರಿಯೋ ನಿರಾಕರಿಸಿದ್ದಾರೆ.