ಅಯೋಧ್ಯೆಯಿಂದ 20 ಕಿ.ಮೀ ದೂರದಲ್ಲಿ ಮಸೀದಿಗೆ 5 ಎಕರೆ ಜಾಗ ನೀಡಿದ ಯೋಗಿ ಸರ್ಕಾರ
ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ರಚನೆ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಅಯೋಧ್ಯೆಯಿಂದ 20 ಕಿ.ಮೀ. ದೂರದಲ್ಲಿ ಮಸೀದಿ ನಿರ್ಮಿಸುವುದಕ್ಕಾಗಿ 5 ಎಕರೆ ಜಮೀನು ಹಂಚಿಕೆ ಮಾಡಿದೆ.
ಸುಪ್ರೀಂ ಕೋರ್ಟ್ ನಿರ್ದೇಶನಾನುಸಾರ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು 5 ಎಕರೆ ಜಮೀನನ್ನು ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಗೆ ನೀಡುವ ಪ್ರಸ್ತಾವನೆಗೆ ಯೋಗಿ ಆದಿತ್ಯನಾಥ್ ನೇತೃತ್ವದ ಸಚಿವ ಸಂಪುಟ ಸಭೆ ಇಂದು ಅನುಮೋದನೆ ನೀಡಿದೆ.
ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ನಿರ್ದೇಶಿಸಿದಂತೆ ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಗೆ ಸಮೀಪ ಗುರುತಿಸಿದ 5 ಎಕರೆ ಜಮೀನನ್ನು ಬುಧವಾರ ಸುನ್ನಿ ವಕ್ಫ್ ಬೋರ್ಡ್ಗೆ ಕೊಡಲು ತೀರ್ಮಾನಿಸಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಇನ್ನು ಉತ್ತರ ಪ್ರದೇಶ ಸರ್ಕಾರ ನೀಡುತ್ತಿರುವ 5 ಎಕರೆ ಜಮೀನು ಸ್ವೀಕರಿಸದಂತೆ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಗೆ ಒತ್ತಾಯಿಸಿದೆ.
ಒಂದು ವೇಳೆ ಉತ್ತರ ಪ್ರದೇಶ ಸರ್ಕಾರ ನೀಡುತ್ತಿರುವ 5 ಎಕರೆ ಜಮೀನನ್ನು ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸ್ವೀಕರಿಸಿದರೆ, ಅದು ದೇಶದ ಎಲ್ಲ ಮುಸಲ್ಮಾನರ ನಿರ್ಣಯವಾಗಲಾರದು ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಹೇಳಿದೆ. ಅಲ್ಲದೆ, ತಾನು ಮತ್ತು ತನ್ನ ಒಡನಾಡಿ ಸಂಸ್ಥೆ, ಸಂಘಟನೆಗಳು ಅಯೋಧ್ಯೆಯಲ್ಲಿ ಜಮೀನು ಸ್ವೀಕರಿಸಬಾರದು ಎಂಬ ನಿರ್ಣಯಕ್ಕೆ ಬಂದಿದ್ದೇವೆ ಎಂದು ಎಐಎಂಪಿಎಲ್ಬಿಯ ಹಿರಿಯ ಕಾರ್ಯಕಾರಿ ಸದಸ್ಯ ಮೌಲಾನಾ ಯಾಸಿನ್ ಉಸ್ಮಾನಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ