ಅಹಮದಾಬಾದ್: ಅಮೆರಿಕದಿಂದ ಗುಜರಾತ್ ಗೆ ಬಂದಿಳಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹಾತ್ಮಾ ಗಾಂಧಿ ಅವರ ಸಬರ್ ಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು.
ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್ ಬರೆದಿರುವ ಸಾಲುಗಳು ಅನೇಕರು ಹುಬ್ಬೇರಿಸುವಂತೆ ಮಾಡಿದೆ. ಟ್ವಿಟರ್ ನಲ್ಲಿ ಈ ಬಗ್ಗೆ ಸಾಕಷ್ಟು ಟ್ವೀಟ್ ಗಳು ಬಂದಿದೆ. ಸಬರ್ ಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಬರೆಯುವಾಗ ಟ್ರಂಪ್ ಮಹಾತ್ಮ ಗಾಂಧಿ ಅವರನ್ನೇ ಮರೆತಿದ್ದಾರೆ ಎಂಬುದು ಅಚ್ಚರಿಗೆ ಕಾರಣವಾಗಿರುವ ಅಂಶ.
ನನ್ನ ಪ್ರಿಯ ಮಿತ್ರ ನರೇಂದ್ರ ಮೋದಿ, ಈ ಅತ್ಯದ್ಭುತ ಭೇಟಿಗಾಗಿ ಧನ್ಯವಾದಗಳು ಎಂದಷ್ಟೇ ಟ್ರಂಪ್ ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ನೆಟ್ಟಿಗರು ಟ್ರಂಪ್ ಮಹಾತ್ಮಾ ಗಾಂಧಿ ಅವರನ್ನೇ ಮರೆತಿದ್ದಾರೆ. 2010 ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಮುಂಬೈ ನಲ್ಲಿದ್ದ ಗಾಂಧಿ ಅವರು ಇರುತ್ತಿದ್ದ ಮಣಿ ಭವನಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಮಹಾತ್ಮಾ ಗಾಂಧಿ ಅವರನ್ನು ಸ್ಮರಿಸಿದ್ದರು.
2015 ರಲ್ಲಿ ರಾಜ್ ಘಾಟ್ ಗೆ ಭೇಟಿ ನೀಡಿದ್ದಾಗಲೂ ಸಹ ಬರಾಕ್ ಒಬಾಮ ಸಂದರ್ಶಕರ ಪುಸ್ತಕದಲ್ಲಿ ಮಹಾತ್ಮಾ ಗಾಂಧಿ ಅವರನ್ನು ಸ್ಮರಿಸಿದ್ದರು. ಆದರೆ ಡೊನಾಲ್ಡ್ ಟ್ರಂಪ್ ಮಾತ್ರ ಸಂದರ್ಶಕರ ಪುಸ್ತಕದಲ್ಲಿ ಮಹಾತ್ಮಾ ಗಾಂಧಿ ಅವರನ್ನು ಮರೆತಿದ್ದು ಟ್ವೀಟಿಗರ ಟೀಕೆಗೆ ಗುರಿಯಾಗಿದೆ.
Advertisement