ನಾಲ್ವರು ನಿರ್ಭಯಾ ಅತ್ಯಾಚಾರಿಗಳಿಗೆ ಕೋರ್ಟ್ ಡೆತ್ ವಾರೆಂಟ್, ಜ.22ಕ್ಕೆ ನೇಣಿಗೇರಿಸಲು ಆದೇಶ

ನಿರ್ಭಯಾ ಅತ್ಯಾಚಾರಿಗಳಿಗೆ ಜನವರಿ 22ಕ್ಕೆ ಗಲ್ಲಿಗೇರಿಸಲು ಪಟಿಯಾಲ ಹೌಸ್ ಕೋರ್ಟ್ ತೀರ್ಪು ನೀಡಿದೆ.
ನಿರ್ಭಯಾ ಅತ್ಯಾಚಾರಿಗಳು
ನಿರ್ಭಯಾ ಅತ್ಯಾಚಾರಿಗಳು

ನವದೆಹಲಿ: ನಿರ್ಭಯಾ ಅತ್ಯಾಚಾರಿಗಳಿಗೆ ಜನವರಿ 22ಕ್ಕೆ ಗಲ್ಲಿಗೇರಿಸಲು ಪಟಿಯಾಲ ಹೌಸ್ ಕೋರ್ಟ್ ತೀರ್ಪು ನೀಡಿದೆ. 

ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಅಪರಾಧಿಗಳಿಗೆ ಗಲ್ಲು ಶಿಕ್ಷೆಗೆ ಕೋರ್ಟ್ ಆದೇಶಿಸಿದೆ. ಈ ಮೂಲಕ 7 ವರ್ಷಗಳ ಬಳಿಕ ಇದೀಗ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲಾಗುತ್ತದೆ. 

ನಿರ್ಭಯಾ ಪ್ರಕರಣ ಇಡೀ ಪ್ರಪಂಚದ ಗಮನ ಸೆಳೆದಿತ್ತು. ಡಿಸೆಂಬರ್ 18ರಂದು ಸುಪ್ರೀಂ ಕೋರ್ಟ್ ನಾಲ್ವರು ಅಪರಾಧಿಗಳಿಗೆ ಮರಣ ದಂಡನೆ ಕಾಯಂಗೊಳಿಸಿತ್ತು. 

ಅಪರಾಧಿಗಳಾದ ಅಕ್ಷಯ್, ಮುಖೇಶ್, ವಿನಯ್ ಶರ್ಮಾ, ಪವನ್ ಗುಪ್ತಾನನ್ನು ಗಲ್ಲಿಗೇರಿಸಲಾಗುವುದು. 

ಈ ಪ್ರಕರಣದಲ್ಲಿ ಎಲ್ಲಾ ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ಅತ್ಯಾಚಾರ ಮತ್ತು ಕೊಲೆ ಆರೋಪ ಹೊರಿಸಲಾಗಿದೆ. ಅವರಲ್ಲಿ ಒಬ್ಬರು ಅಪ್ರಾಪ್ತ ವಯಸ್ಕ,ಮೂರು ವರ್ಷಗಳ ಜೈಲುವಾಸದ ನಂತರ ಬಿಡುಗಡೆಯಾಗಿದ್ದಾನೆ. ಮತ್ತೊಬ್ಬ ಆರೋಪಿ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಚಾರಣಾ ನ್ಯಾಯಾಲಯ ೨೦೧೩ ರ ಸೆಪ್ಟೆಂಬರ್‌ನಲ್ಲಿ ಉಳಿದ ನಾಲ್ವರಿಗೆ ಮರಣದಂಡನೆ ವಿಧಿಸಿತು. 2014ರ ಮಾರ್ಚ್‌ನಲ್ಲಿ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಈ ತೀರ್ಪನ್ನು 2017ರ ಮೇನಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಅಪರಾಧಿಗಳು ಸಲ್ಲಿಸಿದ್ದ  ಮರು ಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.

2012ರ ಡಿಸೆಂಬರ್ 16 ರಂದು 23 ವರ್ಷದ ನಿರ್ಭಯಾಳ ಮೇಲೆ ಅಪರಾಧಿಗಳು ದೆಹಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಅತ್ಯಂತ ಕ್ರೂರವಾಗಿ ಹಿಂಸಿಸಿ, ಬಸ್ಸಿನಿಂದ ಹೊರದಬ್ಬಿ ಪರಾರಿಯಾಗಿದ್ದರು. 13 ದಿನಗಳ ಕಾಲ  ಸಾವು ಬದುಕಿನ ನಡುವೆ ಹೋರಾಟ ನಡೆಸಿ ನಿರ್ಭಯಾ 2012 ರ ಡಿಸೆಂಬರ್ 29ರಂದು ಸಿಂಗಪುರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com