ನವದೆಹಲಿ: ಸೋನಿಯಾ ಗಾಂಧಿಯವರು ತಮ್ಮ ಪತಿ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ಹಂತಕರನ್ನು ಕ್ಷಮಿಸಿದಂತೆ ನಿರ್ಭಯಾ ತಾಯಿ ಅತ್ಯಾಚಾರಿಗಳನ್ನು ಕ್ಷಮಿಸಬೇಕು, ಅವರಿಗೆ ಗಲ್ಲುಶಿಕ್ಷೆಯಿಂದ ತಪ್ಪಿಸಬೇಕು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹೇಳಿರುವುದಕ್ಕೆ ನಿರ್ಭಯಾ ತಾಯಿ ಆಶಾ ದೇವಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಅವರು, ನನಗೆ ಸಲಹೆ ಕೊಡಲು ಇಂದಿರಾ ಜೈಸಿಂಗ್ ಯಾರು? ಇಡೀ ರಾಷ್ಟ್ರವೇ ಅಪರಾಧಿಗಳಿಗೆ ಗಲ್ಲುಶಿಕ್ಷೆ ನೀಡುವುದನ್ನು ಸ್ವಾಗತಿಸುತ್ತಿದೆ, ಅಂತಹುದರಲ್ಲಿ ಇವರು ಈ ರೀತಿ ಹೇಳುತ್ತಿದ್ದಾರೆ, ಇಂತವರಿಂದಲೇ ನ್ಯಾಯ ಸಿಗಲು ವಿಳಂಬವಾಗುತ್ತಿದೆ ಎಂದು ಹೇಳಿದ್ದಾರೆ.
ಹೀಗೆ ಸಲಹೆ ಕೊಡಲು ವಕೀಲೆ ಇಂದಿರಾ ಜೈಸಿಂಗ್ ಅವರಿಗೆ ಮನಸ್ಸು ಮತ್ತು ಧೈರ್ಯ ಹೇಗೆ ಬರುತ್ತದೆ ಎಂದು ಗೊತ್ತಾಗುವುದಿಲ್ಲ. ಇಷ್ಟು ವರ್ಷಗಳಲ್ಲಿ ನಾನು ಸುಪ್ರೀಂ ಕೋರ್ಟ್ ನಲ್ಲಿ ಅವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ನನ್ನ ಕಷ್ಟ ಸುಖದ ಬಗ್ಗೆ ಅವರು ಒಂದು ಸಲ ಕೂಡ ಕೇಳಲಿಲ್ಲ, ಈಗ ಅಪರಾಧಿಗಳ ಪರ ಮಾತನಾಡುತ್ತಾರೆ. ಇಂತವರು ಅತ್ಯಾಚಾರಿಗಳಿಗೆ ಬೆಂಬಲ ನೀಡಿ ತಮ್ಮ ಜೀವನ ಸಾಗಿಸಿಕೊಳ್ಳುತ್ತಾರೆ. ಹೀಗಾಗಿಯೇ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದು ಎಂದು ಆಶಾದೇವಿ ಆಕ್ರೋಶ ಹೊರಹಾಕಿದ್ದಾರೆ.
Advertisement