ದೆಹಲಿ ಚುನಾವಣೆ: ಕೇಜ್ರೀವಾಲ್ ರೋಡ್ ಶೋ ವಿಳಂಬ, ನಾಮಪತ್ರ ಸಲ್ಲಿಕೆ ನಾಳೆಗೆ ಮುಂದೂಡಿಕೆ

ದೆಹಲಿ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಅರವಿಂದ್ ಕೇಜ್ರಿವಾಲ್ ರೋಡ್ ಶೋ
ಅರವಿಂದ್ ಕೇಜ್ರಿವಾಲ್ ರೋಡ್ ಶೋ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಕೇಜ್ರಿವಾಲ್ ಅವರು ನಿಗದಿಯಂತೆ ಸೋಮವಾರವೇ ನಾಮಪತ್ರ ಸಲ್ಲಿಸಬೇಕಿತ್ತಾದರೂ, ರೋಡ್ ಶೋ ವಿಳಂಬವಾದ್ದರಿಂದ ನಾಳೆಗೆ ಮುಂದೂಡಲಾಗಿದೆ.

ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಕೆಗೆ ಗಡುವು ನಿಗದಿಯಾಗಿತ್ತು. ಆದರೆ, ಕೇಜ್ರೀವಾಲ್ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ನಿಗದಿತ ಸಮಯಕ್ಕಿಂತ ವಿಳಂಬವಾಗಿ ಆಗಮಿಸಿದ್ದರಿಂದ ಅದು ಸಾಧ್ಯವಾಗಲಿಲ್ಲ. ಆದ್ದರಿಂದ ಅವರು ಕೊನೆಯ ದಿನವೇ ನಾಮಪತ್ರ ಸಲ್ಲಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ನಿಮ್ಮೆಲ್ಲರ ಪ್ರೀತಿಯನ್ನು ನೋಡಿ ನನಗೆ ದಿನರಾತ್ರಿ ಕೆಲಸ ಮಾಡುವ ಸ್ಫೂರ್ತಿ ದೊರೆತಿದೆ. ದೆಹಲಿಯ ಎರಡು ಕೋಟಿ ಜನರ ಕುಟುಂಬದೊಂದಿಗೆ ಮುಂದಿನ ಐದು ವರ್ಷಗಳಲ್ಲಿ ನಾನು ದೆಹಲಿಯನ್ನು ವಿಶ್ವದ ನಂಬರ್ ಒನ್ ನಗರವನ್ನಾಗಿಸಲಿದ್ದೇನೆ" ಎಂದಿದ್ದಾರೆ.

ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ತಮಗೆ ಸಮಯಕ್ಕೆ ಸರಿಯಾಗಿ ಚುನಾವಣಾಧಿಕಾರಿಗಳಕಚೇರಿ ತಲುಪಲು ಸಾಧ್ಯವಾಗಲಿಲ್ಲ. ರೋಡ್ ಶೋ ನಲ್ಲಿ ಜನರನ್ನು ಬಿಟ್ಟು ಹೋಗುವುದು ಹೇಗೆ. ಆದ್ದರಿಂದ ನಾನು ನಾಳೆ ನಾಮಪತ್ರ ಸಲ್ಲಿಸುತ್ತೇನೆ ಎಂದರು. 

'ಜನರ ಸಿಎಂ' ಎಂಬ ಶೀರ್ಷಿಕೆಯ ರೋಡ್ ಶೋ ನಲ್ಲಿ ಎಎಪಿ ಬೆಂಬಲಿಗರು 'ಅಚ್ಚೆ ಬೀತೆ ಪಾಂಚ್ ಸಾಲ್, ಲಗೇ ರಹೋ ಕೇಜ್ರೀವಾಲ್ '( ಐದು ವರ್ಷ ಚೆನ್ನಾಗಿ ಕಳೆಯಿತು, ಕೇಜ್ರಿವಾಲ್ ನೀವು ಮುಂದುವರಿಯಿರಿ) ಎಂಬ ಘೋಷಣೆ ಕೂಗಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com