ಆಂಧ್ರ ವಿಧಾನಸಭೆಯಲ್ಲಿ ವಿಧಾನ ಪರಿಷತ್ ರದ್ದುಗೊಳಿಸುವ ನಿರ್ಣಯ ಅಂಗೀಕಾರ
ಹೈದರಬಾದ್: ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಸೋಮವಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ವಿಧಾನ ಪರಿಷತ್‌ನ್ನು ರದ್ದುಗೊಳಿಸುವ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಲಾಗಿದೆ.
ಇಂದು ಬೆಳಗ್ಗೆಯಷ್ಟೇ 13 ವರ್ಷಗಳ ಹಿಂದೆ ತಮ್ಮ ತಂದೆ ಮತ್ತೆ ಅಸ್ತಿತ್ವಕ್ಕೆ ತಂದಿದ್ದ ವಿಧಾನ ಪರಿಷತ್ ಅನ್ನು ರದ್ದುಗೊಳಿಸುವ ಕುರಿತಂತೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು. ಬಳಿಕ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲಾಯಿತು. ನಿರ್ಣಯದ ಪರವಾಗಿ 133 ಮತಗಳು ಬಿದ್ದಿದ್ದು, ನಿರ್ಣಯದ ವಿರುದ್ಧ ಯಾವುದೇ ಮತ ಚಲಾವಣೆಯಾಗಿಲ್ಲ. ಈ ಮೂಲಕ ಆಂಧ್ರದಲ್ಲೇ ವಿಧಾನ ಪರಿಷತ್ ಅನ್ನು ಎರಡನೇ ಬಾರಿ ವಿಸರ್ಜಿಸಲಾಗಿದೆ.
ನಂತರ ವಿಧಾನ ಪರಿಷತ್ತನ್ನು ವಿಸರ್ಜನೆ ಮಾಡುವ ಮಸೂದೆಯನ್ನು ಮಂಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ಣಯವನ್ನು ಕಳುಹಿಸಲಾಗುತ್ತದೆ. ಸದ್ಯ ದೇಶದಲ್ಲಿ ಕೇವಲ ಆರು ರಾಜ್ಯಗಳಲ್ಲಿ ಮಾತ್ರ ವಿಧಾನ ಪರಿಷತ್ ಅಸ್ತಿತ್ವದಲ್ಲಿದೆ. ಇದರಲ್ಲಿ ಕರ್ನಾಟಕವೂ ಒಂದು. ಇನ್ನುಳಿದ ರಾಜ್ಯಗಳು ಈಗಾಗಲೇ ಮೇಲ್ಮನೆಯನ್ನು ರದ್ದುಗೊಳಿಸಿವೆ.
ಕೆಲವೇ ದಿನಗಳ ಹಿಂದೆ ಮೇಲ್ಮನೆಯಲ್ಲಿ ಜಗನ್ ಸರ್ಕಾರಕ್ಕೆ ಭಾರಿ ಮುಖಭಂಗವಾಗಿತ್ತು. ಸಿಎಂ ಜಗನ್ ಮೋಹನ್ ರೆಡ್ಡಿ ಮಹತ್ವಾಕಾಂಕ್ಷೆಯ ಮೂರು ರಾಜಧಾನಿ ಮತ್ತು ಸಿಆರ್‌ಡಿಎ ರದ್ದುಗೊಳಿಸುವ ಮಸೂದೆಯನ್ನು ವಿಧಾನ ಪರಿಷತ್ ಅನುಮೋದಿಸದೆ ಆಯ್ಕೆ ಸಮಿತಿಗೆ ವರ್ಗಾಯಿಸಿತ್ತು. ಹೀಗಾಗಿ ಪರಿಷತ್ತನ್ನೇ ರದ್ದುಗೊಳಿಸಲು ಜಗನ್ ನಿರ್ಧರಿಸಿದ್ದರು.
1985ರ ಮೇ 31ರಂದು ತೆಲುಗು ದೇಶಂ ಸಂಸ್ಥಾಪಕ ಎನ್.ಟಿ.ರಾಮರಾವ್ ಮುಖ್ಯಮಂತ್ರಿಯಾಗಿದ್ದಾಗ ಆಂಧ್ರ ವಿಧಾನ ಪರಿಷತ್ ನ್ನು ರದ್ದುಗೊಳಿಸಿದ್ದರು. ಈ ಸದನದಿಂದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಹೇಳಿದ್ದರು. 22 ವರ್ಷಗಳ ಬಳಿಕ ಅಂದರೆ 2017ರಲ್ಲಿ ರಾಜಶೇಖರ ರೆಡ್ಡಿಯವರು ವಿಧಾನಪರಿಷತ್ ನ್ನು ಮತ್ತೆ ಅಸ್ತಿತ್ವಕ್ಕೆ ತಂದಿದ್ದರು. ಇದೀಗ ಅವರ ಪುತ್ರ ರದ್ದುಗೊಳಿಸಿದ್ದಾರೆ. ಇದಕ್ಕೆ ತೆಲುಗು ದೇಶಂ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಅಧಿಕಾರಕ್ಕೆ ಬಂದರೆ ಪರಿಷತ್ತನ್ನು ಅಸ್ತಿತ್ವಕ್ಕೆ ತರುವುದಾಗಿ ಘೋಷಣೆ ಮಾಡಿದೆ.

