ಭೋಪಾಲ್ ಅನಿಲ ದುರಂತ: ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ರವೀಂದ್ರ ಭಟ್ 

1984ರ ಭೋಪಾಲ್ ಅನಿಲ ದುರಂತ ಕೇಸಿನ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಹಿಂದೆ ಸರಿದಿದ್ದಾರೆ. 
ಭೋಪಾಲ್ ಅನಿಲ ದುರಂತ: ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ರವೀಂದ್ರ ಭಟ್ 
Updated on

ನವದೆಹಲಿ: 1984ರ ಭೋಪಾಲ್ ಅನಿಲ ದುರಂತ ಕೇಸಿನ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಹಿಂದೆ ಸರಿದಿದ್ದಾರೆ. 


ಅಮೆರಿಕಾ ಮೂಲದ ಯೂನಿಯನ್ ಕಾರ್ಬಿಡ್ ಕಾರ್ಪೊರೇಷನ್ ಕಡೆಯಿಂದ(ಯುಸಿಸಿ) ಭೋಪಾಲ್ ಅನಿಲ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ರೂಪವಾಗಿ 7 ಸಾವಿರದ 844 ಕೋಟಿ ರೂಪಾಯಿ ಹೆಚ್ಚುವರಿ ಹಣ ಬರಬೇಕೆಂದು ಒತ್ತಾಯಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ವಿಚಾರಣೆ ಇದಾಗಿದೆ.


ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ನಾಳೆಗೆ ವಿಚಾರಣೆಯನ್ನು ಮುಂದೂಡಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರು ಈ ಕೇಸಿನ ವಿಚಾರಣೆ ನಡೆಸಲು ನ್ಯಾಯಪೀಠವನ್ನು ರಚಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿತು.


''ಇಂದು ನಾವು ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಿಲ್ಲ. ಮುಖ್ಯ ನ್ಯಾಯಾಧೀಶರ ಆದೇಶಕ್ಕೆ ಕಾಯುತ್ತೇವೆ ಎಂದು ನ್ಯಾಯಪೀಠ'' ಇಂದು ತಿಳಿಸಿತು. ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ವಿನೀತ್ ಸರನ್ ಮತ್ತು ಎಂ ಆರ್ ಶಾ ಕೂಡ ಇದ್ದಾರೆ.


ಇನ್ನು ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶ ಎಸ್ ರವೀಂದ್ರ ಭಟ್, ಅಮೆರಿಕಾದ ಯೂನಿಯನ್ ಸಂಸ್ಥೆ ಪುನರ್ ಪರಿಶೀಲನೆ ಕೋರಿದಾಗ ನಾನು ಯೂನಿಯನ್ ಆಫ್ ಇಂಡಿಯಾ ಪರವಾಗಿ ವಾದ ಮಂಡಿಸಿದ್ದೆ ಎಂದರು.


1984ರ ಡಿಸೆಂಬರ್ 2 ಮತ್ತು 3ರಂದು ರಾತ್ರಿ ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಯಿಂದ ವಿಷಾನಿಲ ಸೋರಿಕೆಯಾಗಿ 3 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟು 1.02 ಲಕ್ಷಕ್ಕೂ ಅಧಿಕ ಮಂದಿಯ ಆರೋಗ್ಯ ಮೇಲೆ ತೀವ್ರ ಪರಿಣಾಮ ಬೀರಿತ್ತು. ಇಂದು ಡೌ ಕೆಮಿಕಲ್ಸ್ ಒಡೆತನದ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಪರಿಹಾರವಾಗಿ 715 ಕೋಟಿ ರೂಪಾಯಿ ನೀಡಿತ್ತು. ಈ ದುರಂತದಲ್ಲಿ ಬದುಕುಳಿದವರು ತಮಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ಸೂಕ್ತ ಪರಿಹಾರ ಸಿಗಬೇಕೆಂದು ಇಷ್ಟು ವರ್ಷಗಳಿಂದ ನ್ಯಾಯಾಲಯದಲ್ಲಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ. 


ಹೆಚ್ಚಿನ ಪರಿಹಾರವನ್ನು ಕಂಪೆನಿ ಕಡೆಯಿಂದ ಕೊಡಿಸುವಂತೆ ಕೇಂದ್ರ ಸರ್ಕಾರ 2010ರ ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಿತ್ತು. 


2010, ಜೂನ್ 7ರಂದು ಭೋಪಾಲ್ ಕೋರ್ಟ್ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ನ ಏಳು ಮಂದಿ ಎಕ್ಸಿಕ್ಯೂಟಿವ್ ಗಳು ಅಪರಾಧಿಗಳೆಂದು ತೀರ್ಪು ನೀಡಿ ಎರಡು ವರ್ಷ ಜೈಲು ಶಿಕ್ಷೆ ತೀರ್ಪು ನೀಡಿತ್ತು. ಯುಸಿಸಿ ಅಧ್ಯಕ್ಷ ವಾರ್ರನ್ ಆಂಡರ್ಸನ್ ಪ್ರಮುಖ ಅಪರಾಧಿಯಾಗಿದ್ದರು. ಆದರೆ ಅವರು ವಿಚಾರಣೆಗೆ ಹಾಜರಾಗಲಿಲ್ಲ.


ಫೆಬ್ರವರಿ 1, 1992ರಲ್ಲಿ ಭೋಪಾಲ್ ಸಿಜೆಎಂ ಕೋರ್ಟ್ ಆಂಡರ್ಸನ್ ಅವರನ್ನು ತಲೆಮರೆಸಿಕೊಂಡಿದ್ದಾರೆ ಎಂದು ಘೋಷಿಸಿತ್ತು. ಭೋಪಾಲ್ ಕೋರ್ಟ್ ಆಂಡೆರ್ಸನ್ ವಿರುದ್ಧ ಎರಡು ಬಾರಿ 1992 ಮತ್ತು 2009ರಲ್ಲಿ ಜಾಮೀನುರಹಿತ ವಾರಂಟ್ ಹೊರಡಿಸಿತ್ತು. 2014ರ ಸೆಪ್ಟೆಂಬರ್ ನಲ್ಲಿ ಆಂಡರ್ಸನ್ ಮೃತಪಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com